ವಿಜೃಂಭಣೆಯಿಂದ ಜರುಗಿದ ಶ್ರೀ ದೊಡ್ಡನಹಳ್ಳಿ ಚೌಡೇಶ್ವರಿ ಅಮ್ಮನವರ ಆರನೇ ವರ್ಷದ ಜಾತ್ರಾ ಮಹೋತ್ಸವ

ವಿಜೃಂಭಣೆಯಿಂದ ಜರುಗಿದ ಶ್ರೀ ದೊಡ್ಡನಹಳ್ಳಿ ಚೌಡೇಶ್ವರಿ ಅಮ್ಮನವರ 6ನೇ ವರ್ಷದ ಜಾತ್ರಾ ಮಹೋತ್ಸವ.:-

(ಹತ್ತು ಸಾವಿರಕ್ಕೂ ಹೆಚ್ಚು ಭಕ್ತರಿಂದ ದೇವಿಯ ದರ್ಶನ – ಅನ್ನಸಂತರ್ಪಣೆ ವ್ಯವಸ್ಥೆಗೆ ಅಪಾರ ಮೆಚ್ಚುಗೆ. )

ಸಕಲೇಶಪುರ:ಸಕಲ ಭಕ್ತರ ಇಷ್ಟಾರ್ಥಗಳನ್ನು ನೆರವೇರಿಸಿ, ಹರಕೆಗಳನ್ನು ಈಡೇರಿಸುವ ಮೂಲಕ ಲಕ್ಷಾಂತರ ಭಕ್ತರ ನಂಬಿಕೆಗೆ ಪಾತ್ರವಾಗಿರುವ ಶ್ರೀ ದೊಡ್ಡನಹಳ್ಳಿ ಚೌಡೇಶ್ವರಿ ಅಮ್ಮನವರ 6ನೇ ವರ್ಷದ ಜಾತ್ರಾ ಮಹೋತ್ಸವ ಮಂಗಳವಾರ ಅತ್ಯಂತ ವಿಜೃಂಭಣೆಯಿಂದ ಜರುಗಿತು. ಜಾತ್ರಾ ಮಹೋತ್ಸವಕ್ಕೆ ರಾಜ್ಯದ ವಿವಿಧ ಭಾಗಗಳೊಂದಿಗೆ ಹೊರರಾಜ್ಯಗಳಿಂದಲೂ ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದು ಪುನೀತರಾದರು.

ಸಕಲೇಶಪುರ ತಾಲ್ಲೂಕಿನಿಂದ ಸುಮಾರು 30 ಕಿಲೋಮೀಟರ್ ದೂರದಲ್ಲಿರುವ, ಯಸಳೂರು ಹೋಬಳಿಯ ಕುರಭತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಈ ಪುಣ್ಯಕ್ಷೇತ್ರವು ಭಕ್ತರ ಅಪಾರ ನಂಬಿಕೆಯ ಕೇಂದ್ರವಾಗಿದೆ. ಆರಂಭದಲ್ಲಿ ಗದ್ದೆಯಲ್ಲಿ ಚೌಡಿ ದೇವರಾಗಿ ಪೂಜಿಸಲ್ಪಟ್ಟಿದ್ದ ಈ ದೇವಿಯು, ಮರದ ಕೆಳಗೆ ಕಲ್ಲಿನ ಸ್ವರೂಪದಲ್ಲಿದ್ದರೂ, ಭಕ್ತರ ಕಷ್ಟಗಳನ್ನು ಆಲಿಸಿ ಪರಿಹಾರ ನೀಡುತ್ತಿದ್ದ ಕಾರಣ ದಿನೇದಿನೇ ಭಕ್ತರ ಸಂಖ್ಯೆ ಹೆಚ್ಚುತ್ತಾ ಬಂದಿದೆ. ಭಕ್ತರ ಇಷ್ಟಾರ್ಥಗಳನ್ನು ನೆರವೇರಿಸಿದ ಮಹಿಮೆಯಿಂದಾಗಿ, ನಂತರ ದೇವಿಯು ಮುಖ ಸ್ವರೂಪವನ್ನು ತಾಳಿ, ಇಂದು ಭವ್ಯ ದೇವಸ್ಥಾನದ ಗರ್ಭಗುಡಿಯಲ್ಲಿ ಪ್ರತಿಷ್ಠಾಪನೆಯಾಗಿ ಪೂಜಿಸಲ್ಪಡುತ್ತಿದೆ.


ಭಕ್ತಿಭಾವದೊಂದಿಗೆ ಆರಂಭವಾದ ಉತ್ಸವ.:-

ದಿನಾಂಕ 26-01-2026, ಸೋಮವಾರ ಸಂಜೆ 6 ಗಂಟೆಯಿಂದ ಕಳಸ ಪೂಜೆ ಕಾರ್ಯಕ್ರಮ ಆರಂಭಗೊಂಡಿತು. ಗ್ರಾಮದ ಈಶ್ವರ ದೇವಸ್ಥಾನದಿಂದ ಬೆಳ್ಳಿರಥದಲ್ಲಿ ಚೌಡೇಶ್ವರಿ ಅಮ್ಮನ ಉತ್ಸವ ಮೂರ್ತಿಯನ್ನು, ಕುಂಭಮೇಳ, ದೀಪಾಲಂಕಾರ ಹಾಗೂ ಭಜನಾ ಮೇಳದೊಂದಿಗೆ ದೇವಿಯ ಸಂನಿಧಾನಕ್ಕೆ ಕರೆ ತರಲಾಯಿತು. ಬಳಿಕ ವಿಶೇಷ ಮಂಗಳಾರತಿ ಪೂಜೆ ನೆರವೇರಿಸಿ, ರಾತ್ರಿ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

ಸಾವಿರಾರು ಭಕ್ತರಿಂದ ದೇವಿಯ ದರ್ಶನ.:-

27-01-2026, ಮಂಗಳವಾರ ಬೆಳಗ್ಗೆಯಿಂದ ಹೋಮ–ಹವನ, ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಿದವು. ಬೆಳಗ್ಗೆಯಿಂದಲೇ ಸಾವಿರಾರು ಭಕ್ತರು ಸರತಿ ಸಾಲಿನಲ್ಲಿ ನಿಂತು ಶ್ರೀ ದೊಡ್ಡನಹಳ್ಳಿ ಚೌಡೇಶ್ವರಿ ಅಮ್ಮನವರ ದರ್ಶನ ಪಡೆದು ಹರಕೆ ಸಲ್ಲಿಸಿದರು. ಕರ್ನಾಟಕ ಮಾತ್ರವಲ್ಲದೆ ವಿವಿಧ ರಾಜ್ಯಗಳಿಂದ ಆಗಮಿಸಿದ ಭಕ್ತರು ದೇವಿಯ ಮಹಿಮೆಗೆ ಕೃತಜ್ಞತೆ ಸಲ್ಲಿಸಿದರು.

ಅನ್ನಸಂತರ್ಪಣೆಗೆ ಭಕ್ತರ ಅಪಾರ ಮೆಚ್ಚುಗೆ.:-

ಮಧ್ಯಾಹ್ನ ನಡೆದ ಅನ್ನಸಂತರ್ಪಣದಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಭಕ್ತರು ಪಾಲ್ಗೊಂಡರು.
ಶ್ರೀ ದೊಡ್ಡನಹಳ್ಳಿ ಚೌಡೇಶ್ವರಿ ಸೇವಾ ಟ್ರಸ್ಟ್ ವತಿಯಿಂದ ವ್ಯವಸ್ಥಿತವಾಗಿ, ಸ್ವಚ್ಛತೆ ಹಾಗೂ ಶಿಸ್ತಿನೊಂದಿಗೆ ತಯಾರಿಸಿದ ರುಚಿಕರ ಭೋಜನವನ್ನು ಭಕ್ತರು ಸವಿದರು. ಅನ್ನಸಂತರ್ಪಣೆ ವ್ಯವಸ್ಥೆ ಭಕ್ತಾದಿಗಳ ವಿಶೇಷ ಮೆಚ್ಚುಗೆಗೆ ಪಾತ್ರವಾಯಿತು.

ಜಾತ್ರಾ ಮಾರುಕಟ್ಟೆಗೆ ಜನಸಾಗರ.:-

ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚು ಸಂಖ್ಯೆಯಲ್ಲಿ ವ್ಯಾಪಾರಿಗಳು ಜಾತ್ರೆಗೆ ಆಗಮಿಸಿದ್ದು, ಸುತ್ತಮುತ್ತಲಿನ ಹಳ್ಳಿಗಳ ಜನರು ತಮ್ಮ ಅಗತ್ಯ ವಸ್ತುಗಳು, ಸಿಹಿ ತಿಂಡಿಗಳು ಹಾಗೂ ಮಕ್ಕಳ ಆಟಿಕೆಗಳನ್ನು ಖರೀದಿಸಲು ಜಾತ್ರಾ ಮೈದಾನದಲ್ಲಿ ಮುಗಿಬಿದ್ದರು. ಇದರಿಂದ ಜಾತ್ರೆಗೆ ಇನ್ನಷ್ಟು ಕಳೆ ಬಂದಿತ್ತು.

ಒಟ್ಟಾರೆ, ಶ್ರೀ ದೊಡ್ಡನಹಳ್ಳಿ ಚೌಡೇಶ್ವರಿ ಸೇವಾ ಟ್ರಸ್ಟ್ ಹಾಗೂ ಆಡಳಿತ ಮಂಡಳಿಯವರ ವ್ಯವಸ್ಥಿತ ಆಯೋಜನೆಯಿಂದ ಜರುಗಿದ 6ನೇ ವರ್ಷದ ಜಾತ್ರಾ ಮಹೋತ್ಸವವು ಭಕ್ತಾದಿಗಳ ಹೃದಯ ಗೆದ್ದು ಯಶಸ್ವಿಯಾಗಿ ಸಂಪನ್ನಗೊಂಡಿತು. ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಭಕ್ತರ ಸಂಖ್ಯೆ ಶ್ರೀ ದೊಡ್ಡನಹಳ್ಳಿ ಚೌಡೇಶ್ವರಿ ತಾಯಿಯ ಮಹಿಮೆಗೆ ಮತ್ತೊಮ್ಮೆ ಸಾಕ್ಷಿಯಾಗಿದೆ.

Leave a Reply

Your email address will not be published. Required fields are marked *

error: Content is protected !!