
ಸಕಲೇಶಪುರದಲ್ಲಿ ಅದ್ದೂರಿಯಾಗಿ ನಡೆದ ಪತ್ರಕರ್ತರ ಸಂಘದ ಪದಗ್ರಹಣ ಸಮಾರಂಭ:ಪ್ರಜಾಪ್ರಭುತ್ವದ ಕಣ್ಣು-ಕಿವಿಗಳಾಗಿ ಪತ್ರಕರ್ತರು ಸೇವೆ ಸಲ್ಲಿಸಲಿ:ತೆಂಕಲಗೂಡಿನ ಶ್ರೀ ಚನ್ನ ಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿಸಕಲೇಶಪುರ: ಜೂ,29:ಪತ್ರಕರ್ತರು ಯಾವುದೇ ಬಾಹ್ಯ ಶಕ್ತಿಗಳ ಪ್ರಭಾವಕ್ಕೆ ಒಳಗಾಗದೆ, ತಮ್ಮ ವಿವೇಚನೆಯನ್ನು ಬಳಸಿ ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು ಎಂದು ತೆಂಕಲಗೂಡಿನ ಶ್ರೀ ಚನ್ನ ಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು.ಸೋಮವಾರ ಪಟ್ಟಣದ ಲಯನ್ಸ್ ಹಾಲ್‌ನಲ್ಲಿ ಆಯೋಜಿಸಲಾಗಿದ್ದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ರಿ.) ತಾಲ್ಲೂಕು ಘಟಕದ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪತ್ರಿಕೋದ್ಯಮವು ಪ್ರಜಾಪ್ರಭುತ್ವದ ಕಣ್ಣು ಮತ್ತು ಕಿವಿಯಾಗಿದ್ದು, ಸತ್ಯವನ್ನು ನಿರ್ಭೀತಿಯಿಂದ ಜನರ ಮುಂದಿಡುವ ಗುರುತರ ಜವಾಬ್ದಾರಿ ಪತ್ರಕರ್ತರ ಮೇಲಿದೆ. ಸುದ್ದಿಗಳ ಪ್ರಸಾರದಲ್ಲಿ ಸತ್ಯ, ಪ್ರಾಮಾಣಿಕತೆ ಮತ್ತು ಸಾಮಾಜಿಕ ಹೊಣೆಗಾರಿಕೆಗೆ ಆದ್ಯತೆ ಇರಬೇಕು ಎಂದು ಅವರು ಕಿವಿಮಾತು ಹೇಳಿದರು.ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಾಸಕ ಸಿಮೆಂಟ್ ಮಂಜು ಮಾತನಾಡಿ, ಪತ್ರಕರ್ತರು ರಾಜಕೀಯ, ಆರ್ಥಿಕ ಅಥವಾ ವೈಯಕ್ತಿಕ ಒತ್ತಡಗಳಿಗೆ ಮಣಿಯದೆ ನಿಷ್ಪಕ್ಷಪಾತವಾಗಿ ವರದಿ ಮಾಡಿದಾಗ ಮಾತ್ರ ಸಮಾಜದಲ್ಲಿ ಮಾಧ್ಯಮಗಳ ಮೇಲಿನ ವಿಶ್ವಾಸ ಉಳಿಯುತ್ತದೆ ಎಂದು ಎಚ್ಚರಿಸಿದರು.ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷ ಜೆ.ಆರ್. ಕೆಂಚೇಗೌಡ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಪತ್ರಿಕೋದ್ಯಮವು ಸೇವಾ ಮನೋಭಾವದ ಕಾಯಕವೇ ಹೊರತು ಹಣ ಗಳಿಸುವ ಉದ್ದಿಮೆಯಲ್ಲ. ಇಲ್ಲಿ ಗಂಡಾಂತರಗಳನ್ನು ಎದುರಿಸಿಕೊಂಡು ಸೇವೆ ಮಾಡುವುದನ್ನು ಪತ್ರಕರ್ತರು ಮೈಗೂಡಿಸಿಕೊಳ್ಳಬೇಕು ಎಂದರು.ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ಹೆಚ್.ಕೆ. ಕುಮಾರಸ್ವಾಮಿ, ಮಾಜಿ ಶಾಸಕ ಬಿ.ಆರ್. ಗುರುದೇವ್, ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಮುರುಳಿ ಮೋಹನ್, ಕಾಂಗ್ರೆಸ್ ತಾಲ್ಲೂಕು ಅಧ್ಯಕ್ಷ ಬೈರಮುಡಿ ಚಂದ್ರು, ಬಿಜೆಪಿ ತಾಲ್ಲೂಕು ಅಧ್ಯಕ್ಷ ಅಶ್ವಥ್, ಜಿಲ್ಲಾ ಸಂಘದ ಕಾರ್ಯದರ್ಶಿ ಕುಶ್ವಂತ್, ರಾಷ್ಟ್ರೀಯ ಕಾರ್ಯಕಾರಿ ಮಂಡಳಿ (IFWJ) ಸದಸ್ಯರಾದ ರವಿ ನಾಕಲಗೋಡು ಹಾಗೂ ಹೆತ್ತೂರು ನಾಗರಾಜ್, ಮಾಜಿ ಅಧ್ಯಕ್ಷ ಬಾಳ್ಳು ಗೋಪಾಲ್, ಲಯನ್ಸ್ ಟ್ರಸ್ಟ್ ಅಧ್ಯಕ್ಷ ಸಂಜೀತ್ ಶೆಟ್ಟಿ , ಲಯನ್ಸ್ ಅಧ್ಯಕ್ಷ ಗಿರೀಶ್ ಮಂಜುನಾಥ್, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಗುರುಮೂರ್ತಿ ಬದ್ರಿಯಾ ಮಸೀದಿ ಮಾಜಿ ಅಧ್ಯಕ್ಷ ಆದಮ್ ಹಾಜಿ ಉಪಸ್ಥಿತರಿದ್ದರು.ರಾಜ್ಯ ಅಧ್ಯಕ್ಷ ಶಿವಾನಂದ ತಗಡೂರ್, ಉಪಾಧ್ಯಕ್ಷ ಎಚ್.ಪಿ. ಮದನ್ ಗೌಡ, ಮಾಜಿ ಶಾಸಕ ಹೆಚ್.ಎಂ. ವಿಶ್ವನಾಥ್, ಸಯ್ಯದ್ ಮುಪೀಜ್, ಪುನೀತ್ ಬನ್ನಳ್ಳಿ, ಕಾರ್ಯಕ್ರಮಕ್ಕೆ ತಮ್ಮ ಶುಭಾಶಯ ಸಂದೇಶಗಳನ್ನು ರವಾನಿಸಿದರು.ಕಾರ್ಯಕ್ರಮದ ಆರಂಭದಲ್ಲಿ ಎಚ್.ಡಿ. ಕುಮಾರ್ ಅವರು ಪ್ರಾರ್ಥನೆ ಸಲ್ಲಿಸಿದರು. ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ಸ್ವಾಗತವನ್ನು ಪ್ರಧಾನ ಕಾರ್ಯದರ್ಶಿ ಅಕ್ಬರ್ ಜುನೈದ್ ನೆರವೇರಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಸಂಘದ ಖಜಾಂಚಿ ಯೋಗೇಶ್ ನಿರ್ವಹಿಸಿದರು. ಉಪಾಧ್ಯಕ್ಷ ನವೀನ್ ಸದಾ ಅವರು ಸುಗಮ ಸಂಗೀತವನ್ನು ಪ್ರಸ್ತುತಪಡಿಸಿದರು. ಪತ್ರಕರ್ತರ ಸಂಘದ ಪ್ರಮುಖರಾದ ಎಸ್. ಜೆ. ನವೀನ್ ಶೆಟ್ಟಿ,ನಿರಂಜನ್ ಮೂರ್ತಿ, ವಿನಯ್ ಕೂಡರಸ್ತೆ, ಚೇತನ್, ಅರ್ಜುನ್ ಹಾಗೂ ಮಲ್ನಾಡ್ ಮೆಹಬೂಬ್ ಅವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು. ಕೊನೆಯಲ್ಲಿ ಹೆತ್ತೂರು ರವಿ ಅವರು ವಂದನಾರ್ಪಣೆ ಸಲ್ಲಿಸಿದರು.




