ಹೆತ್ತೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಅಭಿವೃದ್ಧಿ ಕಾಮಗಾರಿಯಲ್ಲಿ ಭಾರಿ ಕಳಪೆ ಆರೋಪ.

ಹೆತ್ತೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಅಭಿವೃದ್ಧಿ ಕಾಮಗಾರಿಯಲ್ಲಿ ಭಾರೀ ಕಳಪೆ ಆರೋಪ.

₹40 ಲಕ್ಷಕ್ಕೂ ಅಧಿಕ ಕಾಮಗಾರಿಯ ಗುಣಮಟ್ಟ ಪರಿಶೀಲನೆಗೆ ಗ್ರಾಮಸ್ಥರು, ಸಂಘಟನೆಗಳ ಆಗ್ರಹ – ಬಿಲ್ ತಡೆದು ಉನ್ನತ ಮಟ್ಟದ ತನಿಖೆಗೆ ಒತ್ತಾಯ.

ಸಕಲೇಶಪುರ: ತಾಲ್ಲೂಕಿನ ಹೆತ್ತೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಅಭಿವೃದ್ಧಿಗಾಗಿ ಕರ್ನಾಟಕ ಆರೋಗ್ಯ ವ್ಯವಸ್ಥೆಗಳ ಅಭಿವೃದ್ಧಿ ಮತ್ತು ಸುಧಾರಣಾ ಯೋಜನೆ (KHSDRP) ಅಡಿಯಲ್ಲಿ ಸುಮಾರು ₹33.33 ಲಕ್ಷ ಹಾಗೂ ಸಭಾಂಗಣ (ಮೀಟಿಂಗ್ ಹಾಲ್) ಮತ್ತು ಬೋರ್‌ವೆಲ್ ಸೇರಿದಂತೆ ಒಟ್ಟು ಸುಮಾರು ₹40 ಲಕ್ಷಕ್ಕೂ ಅಧಿಕ ಮೊತ್ತದ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದ್ದು, ಕಾಮಗಾರಿಯಲ್ಲಿ ವ್ಯಾಪಕ ಕಳಪೆ ಗುಣಮಟ್ಟ ಅನುಸರಿಸಲಾಗಿದೆ ಎಂದು ಗ್ರಾಮಸ್ಥರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಗಂಭೀರ ಆರೋಪ ಮಾಡಿದ್ದಾರೆ.ಆಸ್ಪತ್ರೆಯ ಸುತ್ತಲಿನ ಕಾಂಪೌಂಡ್ ಗೋಡೆ, ಸಿಮೆಂಟ್ ನೆಲಹಾಸು, ವಾಹನ ಹಾಗೂ ಆಂಬುಲೆನ್ಸ್ ನಿಲುಗಡೆ ಶೆಡ್, ಕಬ್ಬಿಣದ ಕಂಬಗಳು, ಮೇಲ್ಛಾವಣಿ, ಗೇಟ್, ಕಿಟಕಿಗಳು, ಮೀಟಿಂಗ್ ಹಾಲ್, ವಿದ್ಯುತ್ ವೈರಿಂಗ್ ಸೇರಿದಂತೆ ಬಹುತೇಕ ಎಲ್ಲಾ ಕಾಮಗಾರಿಗಳಲ್ಲೂ ಗುಣಮಟ್ಟದ ಕೊರತೆ ಕಂಡುಬಂದಿದೆ ಎಂದು ದೂರಲಾಗಿದೆ.ಈ ಹಿನ್ನೆಲೆಯಲ್ಲಿ ವಳಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಳೆಗಾರರ ಸಂಘದ ಪದಾಧಿಕಾರಿಗಳು, ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಘಟಕದ ಸದಸ್ಯರು ಹಾಗೂ ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಕೆ.ಪಿ. ಕೃಷ್ಣೇಗೌಡ ಅವರು ಆಸ್ಪತ್ರೆಗೆ ಭೇಟಿ ನೀಡಿ ಕಾಮಗಾರಿಯನ್ನು ಪರಿಶೀಲಿಸಿದರು. ಈ ವೇಳೆ ಗುತ್ತಿಗೆದಾರ ಹಾಗೂ ಸಂಬಂಧಪಟ್ಟ ಸಿಬ್ಬಂದಿಯೊಂದಿಗೆ ಚರ್ಚಿಸಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.ಗ್ರಾಮಸ್ಥರ ಆರೋಪದಂತೆ, ಈಗಾಗಲೇ ಸುಮಾರು ₹14 ಲಕ್ಷಕ್ಕೂ ಅಧಿಕ ಹಣ ಬಿಡುಗಡೆ ಆಗಿದ್ದರೂ ಅದರ ಅನುಗುಣವಾಗಿ ಗುಣಮಟ್ಟದ ಕಾಮಗಾರಿ ನಡೆದಿಲ್ಲ. ಹೊಸ ನಿರ್ಮಾಣದಲ್ಲಿ ಹೊಸ ಕಬ್ಬಿಣ ಬಳಸದೆಯೇ ಹಳೆಯ ಕಬ್ಬಿಣದ ಕಂಬಗಳಿಗೆ ಕೇವಲ ಬಣ್ಣ ಬಳಿದು ಮರುಬಳಕೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.ನಿರ್ಮಿಸಲಾಗಿರುವ ಶೆಡ್‌ನಲ್ಲಿ ಅಳವಡಿಸಿರುವ ಕಬ್ಬಿಣದ ರಚನೆ ಗುಣಮಟ್ಟದ್ದಾಗಿಲ್ಲ. ಹಲವು ಕಡೆ ಈಗಾಗಲೇ ತುಕ್ಕು ಹಿಡಿದಿರುವುದಲ್ಲದೆ, ಕಬ್ಬಿಣ ಬಾಗಿರುವುದು ಕಂಡುಬಂದಿದೆ ಎಂದು ಗ್ರಾಮಸ್ಥರು ದೂರಿದ್ದಾರೆ. ಮೇಲ್ಛಾವಣಿಗೆ ಹಳೆಯ ಶೀಟ್‌ಗಳನ್ನು ವೆಲ್ಡಿಂಗ್ ಮಾಡಿ ಸ್ವಲ್ಪ ಹೊಸ ಶೀಟ್‌ಗಳನ್ನು ಜೋಡಿಸಿರುವುದು ಹಾಗೂ ಮೇಲ್ಛಾವಣಿಯ ನಿರ್ಮಾಣವೂ ತಾಂತ್ರಿಕ ಮಾನದಂಡಗಳಿಗೆ ಅನುಗುಣವಾಗಿಲ್ಲ ಎಂದು ಆರೋಪಿಸಲಾಗಿದೆ.ಶೆಡ್‌ನ ವೆಲ್ಡಿಂಗ್ ಕಾಮಗಾರಿ ಸಮರ್ಪಕವಾಗಿಲ್ಲ. ಗೇಟ್ ನಿರ್ಮಾಣವೂ ಕಳಪೆಯಾಗಿದ್ದು, ಇದು ಈಗಾಗಲೇ ಮುರಿದು ಹೋಗಿದ್ದು ಹಾಸ್ಪೆಟಲ್ ನವರು ತಮ್ಮ ಹಣದಿಂದ ವೆಲ್ಡಿಂಗ್ ಮಾಡಿಸಿದ್ದಾರೆ.ಪೇಂಟಿಂಗ್ ಅತ್ಯಂತ ಕಳಪೆ ಮಟ್ಟದಲ್ಲಿ ನಡೆದಿದೆ ಎಂದು ಪರಿಶೀಲನೆ ವೇಳೆ ಗಮನಕ್ಕೆ ಬಂದಿದೆ ಎಂದು ಮುಖಂಡರು ತಿಳಿಸಿದ್ದಾರೆ.ಆಸ್ಪತ್ರೆಯ ಹೆರಿಗೆ ವಾರ್ಡ್ ಸೇರಿದಂತೆ ಹಲವು ಕೊಠಡಿಗಳ ಮೇಲ್ಛಾವಣಿಯಿಂದ ಈಗಾಗಲೇ ಮಳೆ ನೀರು ಸೋರಿಕೆಯಾಗುತ್ತಿದ್ದು, ಒಳಭಾಗದಲ್ಲಿ ನೀರು ನಿಂತು ರೋಗಿಗಳು ಹಾಗೂ ಸಿಬ್ಬಂದಿ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.ಮೀಟಿಂಗ್ ಹಾಲ್‌ನಲ್ಲಿ ಅಳವಡಿಸಿರುವ ಕಿಟಕಿಗಳ ಗಾಜು ಅತ್ಯಂತ ಕಳಪೆ ಗುಣಮಟ್ಟದ್ದಾಗಿದ್ದು, ಸ್ವಲ್ಪ ಒತ್ತಡಕ್ಕೂ ಒಡೆಯುವ ಸ್ಥಿತಿಯಲ್ಲಿದೆ ಎಂದು ಆರೋಪಿಸಲಾಗಿದೆ. ಮಳೆ ಬಂದಾಗ ಕಿಟಕಿಗಳ ಮೂಲಕ ನೀರು ಒಳಬರುತ್ತಿದ್ದು, ಹಾಕಿರುವ ಟೈಲ್ಸ್ ಸಹ ಸಮರ್ಪಕವಾಗಿ ಅಳವಡಿಸಿಲ್ಲ ಎಂದು ದೂರಲಾಗಿದೆ.ಆಸ್ಪತ್ರೆಯಲ್ಲಿ ಸಂಪೂರ್ಣ ಹೊಸ ವಿದ್ಯುತ್ ವೈರಿಂಗ್ ಮಾಡಬೇಕಿದ್ದರೂ ಹಳೆಯ ವ್ಯವಸ್ಥೆಯನ್ನೇ ಉಳಿಸಿಕೊಂಡು ಅಲ್ಲಲ್ಲಿ ಸ್ವಿಚ್‌ಗಳು ಇರುವ ಜಾಗಕ್ಕೆ ಹೊಸ ಸ್ವಿಚ್ ಅಳವಡಿಸುವ ಕೆಲಸ ಮಾತ್ರ ಮಾಡಲಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾಗಳನ್ನೂ ಅಗತ್ಯ ಸ್ಥಳಗಳಲ್ಲಿ ಅಳವಡಿಸಿಲ್ಲ ಮಳೆ ನೀರು ಹಾಗೂ ಗೋಡೆಗೆ ಹೊಡೆದಿರುವ ಬಣ್ಣ ಸಿಸಿಟಿವಿ ಮೇಲೆ ಸೋರುತಿದೆ ಎಂದು ತಿಳಿಸಿದ್ದಾರೆ.ಆಸ್ಪತ್ರೆ ಆವರಣದಲ್ಲಿ ಅಳವಡಿಸಿರುವ ಇಂಟರ್‌ಲಾಕ್ ಬ್ಲಾಕ್‌ಗಳನ್ನು ಸಮರ್ಪಕವಾಗಿ ಅಳವಡಿಸದ ಕಾರಣ ಹಲವು ಕಡೆ ಅಸಮತೋಲನ ಕಂಡುಬರುತ್ತಿದೆ, ಈಗಾಗಲೇ ಅಲ್ಲಲ್ಲಿ ಬಿರುಕು ಬಿಟ್ಟು ಮಳೆ ನೀರು ನಿಂತಿದೆ.ಎಂದು ಪರಿಶೀಲನೆ ವೇಳೆ ಮುಖಂಡರು ಅಭಿಪ್ರಾಯಪಟ್ಟರು.ಮಳೆಗಾಲದಲ್ಲೇ ಬೋರ್‌ವೆಲ್ – ಅವೈಜ್ಞಾನಿಕ ಕ್ರಮ? :-ಆಸ್ಪತ್ರೆಗೆ ನೀರಿನ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಮಳೆಗಾಲದಲ್ಲೇ ಬೋರ್‌ವೆಲ್ ಕೊರೆಯಲಾಗುತ್ತಿದೆ. ಮಲೆನಾಡು ಪ್ರದೇಶದಲ್ಲಿ ಜುಲೈ–ಆಗಸ್ಟ್ ತಿಂಗಳಲ್ಲಿ ಮಳೆ ಹೆಚ್ಚಿರುವುದರಿಂದ ಈ ಅವಧಿಯಲ್ಲಿ ಅಲ್ಪ ಆಳದಲ್ಲಿಯೇ ನೀರು ದೊರೆಯುವ ಸಾಧ್ಯತೆ ಇರುತ್ತದೆ. ಆದರೆ ಬೇಸಿಗೆಯಲ್ಲಿ ಇದೇ ಬೋರ್‌ವೆಲ್ ಬತ್ತಿಹೋಗುವ ಅಪಾಯವಿದ್ದು, ಇಂತಹ ಸಮಯದಲ್ಲಿ ಬೋರ್‌ವೆಲ್ ಕೊರೆಯುವುದು ವೈಜ್ಞಾನಿಕವಾಗಿ ಸೂಕ್ತವಲ್ಲ ಎಂದು ಮುಖಂಡರು ಅಭಿಪ್ರಾಯಪಟ್ಟರು.ಸ್ಥಳದಲ್ಲಿದ್ದ ಗುತ್ತಿಗೆದಾರರು, “ಶಾಸಕರ ಸೂಚನೆಯ ಮೇರೆಗೆ ಬೋರ್‌ವೆಲ್ ಕಾಮಗಾರಿ ಕೈಗೊಳ್ಳಲಾಗಿದೆ” ಎಂದು ಹೇಳಿರುವುದಾಗಿ ಕೆಲ ಗ್ರಾಮಸ್ಥರು ಆರೋಪಿಸಿದ್ದಾರೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಶಾಸಕರು ಸ್ಪಷ್ಟನೆ ನೀಡಬೇಕೆಂದು ಒತ್ತಾಯಿಸಲಾಗಿದೆ.ಇದಲ್ಲದೆ, ಮೀಟಿಂಗ್ ಹಾಲ್ ಹಾಗೂ ಬೋರ್‌ವೆಲ್ ಕಾಮಗಾರಿಗೆ ಸಂಬಂಧಿಸಿದಂತೆ ಮತ್ತೊಮ್ಮೆ ಸಹಿ ಪಡೆದು 7ಲಾಕ್ಸ್ ಬಿಲ್ ಪ್ರಕ್ರಿಯೆ ನಡೆಸಲಾಗಿದೆ ಎಂಬ ಆರೋಪವನ್ನೂ ಕೆಲವು ಗ್ರಾಮಸ್ಥರು ಮಾಡಿದ್ದಾರೆ. ಈ ಕುರಿತು ದಾಖಲೆಗಳನ್ನು ಪರಿಶೀಲಿಸಿ ಸತ್ಯಾಸತ್ಯತೆ ಬಹಿರಂಗಪಡಿಸಬೇಕೆಂದು ಆಗ್ರಹಿಸಿದ್ದಾರೆ.ಗ್ರಾಮಸ್ಥರ ಆರೋಪದಂತೆ, ಗದಗ ಮೂಲದ ಗುತ್ತಿಗೆದಾರ ದುರ್ಗಪ್ಪ ಅವರು ಕಾಮಗಾರಿ ನಿರ್ವಹಿಸುತ್ತಿದ್ದು, ಸ್ಥಳೀಯ ರಾಜಕೀಯ ಬೆಂಬಲದೊಂದಿಗೆ ಕಳಪೆ ಕಾಮಗಾರಿ ನಡೆಸಲಾಗುತ್ತಿದೆ ಎಂದು ದೂರಲಾಗಿದೆ. ಈ ಆರೋಪಗಳ ಬಗ್ಗೆ ಸಂಬಂಧಪಟ್ಟ ಗುತ್ತಿಗೆದಾರ ಹಾಗೂ ಅಧಿಕಾರಿಗಳ ಪ್ರತಿಕ್ರಿಯೆ ಲಭ್ಯವಾಗಿಲ್ಲ.ಅಧಿಕಾರಿಗಳ ವಿರುದ್ಧ ಅಸಮಾಧಾನ.:- ಕಾಮಗಾರಿ ಕುರಿತು ಸಂಬಂಧಪಟ್ಟ ಇಂಜಿನಿಯರ್ ಹಾಗೂ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿದರೂ ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ. ಸ್ಪಷ್ಟ ಉತ್ತರ ನೀಡುತ್ತಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.ಗ್ರಾಮಸ್ಥರು ಹಾಗೂ ವಿವಿಧ ಸಂಘಟನೆಗಳ ಮುಖಂಡರು, ಆಸ್ಪತ್ರೆಯ ಅಭಿವೃದ್ಧಿ ಕಾಮಗಾರಿಯನ್ನು ಉನ್ನತ ಮಟ್ಟದ ತಾಂತ್ರಿಕ ತಂಡದಿಂದ ತಕ್ಷಣ ಪರಿಶೀಲಿಸಿ, ಕಳಪೆ ಕಾಮಗಾರಿ ದೃಢಪಟ್ಟಲ್ಲಿ ಸಂಬಂಧಪಟ್ಟ ಗುತ್ತಿಗೆದಾರ, ಇಂಜಿನಿಯರ್ ಹಾಗೂ ಹೊಣೆಗಾರ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಂಡು, ಅಂತಿಮ ಬಿಲ್ ಬಿಡುಗಡೆ ತಡೆಹಿಡಿಯಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.ಹಾಗೂ ಈ ಕಾಮಗಾರಿಯ ಬಗ್ಗೆ ಶೀಘ್ರದಲ್ಲಿ ಮಾಹಿತಿ ಹಕ್ಕು ಹಾಕಿ ಇದಕ್ಕೆ ಸಂಬಂಧಪಟ್ಟ ಮಾಹಿತಿಯನ್ನು ತೆಗೆದುಕೊಂಡು ಅಧಿಕಾರಿಗಳ ವಿರುದ್ಧ ವ್ಯವಸ್ಥೆ ಮಾಡಲಾಗುವುದು ಎಂದು ಭೇಟಿಯಾದವರು ಹೇಳಿದರು.ಹೇಳಿಕೆಗಳುವಸಂತ್ ಬೊಮ್ಮನಕೆರೆ (ಅಧ್ಯಕ್ಷರು, ಕರ್ನಾಟಕ ರಕ್ಷಣಾ ವೇದಿಕೆ ರೈತ ಘಟಕ):”ಸರ್ಕಾರದ ಹಣ ಜನರ ತೆರಿಗೆಯ ಹಣ. ಸುಮಾರು ₹40 ಲಕ್ಷ ವೆಚ್ಚದ ಕಾಮಗಾರಿ ಇಷ್ಟೊಂದು ಕಳಪೆಯಾಗಿರುವುದು ಅತ್ಯಂತ ಬೇಸರದ ಸಂಗತಿ. ಕಾಮಗಾರಿ ಪೂರ್ಣಗೊಳಿಸುವ ಮೊದಲು ಉನ್ನತ ಮಟ್ಟದ ತಾಂತ್ರಿಕ ತನಿಖೆ ನಡೆಸಿ, ಕಳಪೆ ದೃಢಪಟ್ಟರೆ ಒಂದು ರೂಪಾಯಿಯೂ ಬಿಲ್ ಬಿಡುಗಡೆ ಮಾಡಬಾರದು. ಇಂತಹ ಭ್ರಷ್ಟ ಗುತ್ತಿಗೆದಾರರಿಗೆ ಸರ್ಕಾರ ಶಾಶ್ವತವಾಗಿ ಕಡಿವಾಣ ಹಾಕಬೇಕು.”ಕೆ.ಪಿ. ಕೃಷ್ಣೇಗೌಡ (ಮಾಜಿ ಉಪಾಧ್ಯಕ್ಷರು, ತಾಲೂಕು ಪಂಚಾಯಿತಿ):”ಆಸ್ಪತ್ರೆ ಎಂದರೆ ಜನರ ಜೀವ ಉಳಿಸುವ ಸ್ಥಳ. ಇಲ್ಲಿ ಕಳಪೆ ಕಾಮಗಾರಿಗೆ ಅವಕಾಶವೇ ಇರಬಾರದು. ಪ್ರತಿಯೊಂದು ಕಾಮಗಾರಿಯನ್ನೂ ಮರುಪರಿಶೀಲಿಸಿ, ಗುಣಮಟ್ಟಕ್ಕೆ ಅನುಗುಣವಾಗಿ ಮರುನಿರ್ಮಾಣ ಮಾಡಿಸಬೇಕು. ತಪ್ಪಿತಸ್ಥರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದು ಸರ್ಕಾರದ ಜವಾಬ್ದಾರಿ.”ವಿ. ಪಿ ವಿಶ್ವನಾಥ್, ಅಧ್ಯಕ್ಷರು,ವಳಲಹಳ್ಳಿ ಬೆಳೆಗಾರರ ಸಂಘ”ಆಸ್ಪತ್ರೆಯ ಅಭಿವೃದ್ಧಿಗೆ ಸರ್ಕಾರ ದೊಡ್ಡ ಮೊತ್ತದ ಅನುದಾನ ನೀಡಿದೆ. ಆದರೆ ಜನರಿಗೆ ಉತ್ತಮ ಸೌಲಭ್ಯ ಸಿಗಬೇಕಾದ ಜಾಗದಲ್ಲಿ ಕಳಪೆ ಕಾಮಗಾರಿ ನಡೆದಿರುವುದು ನೋವಿನ ಸಂಗತಿ. ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ವಾಸ್ತವ ಪರಿಶೀಲನೆ ನಡೆಸಿ, ಭ್ರಷ್ಟಾಚಾರಕ್ಕೆ ಅವಕಾಶ ನೀಡಿದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು.”

Leave a Reply

Your email address will not be published. Required fields are marked *

error: Content is protected !!