ನೂತನ ಆರೋಗ್ಯ ಅಧಿಕಾರಿಯಾಗಿ ಡಾ. ಕಿಶೋರ್ ಕುಮಾರ್ ನೇಮಕ

ಸಕಲೇಶಪುರಕ್ಕೆ ನೂತನ ತಾಲೂಕು ಆರೋಗ್ಯಾಧಿಕಾರಿ: ಆರೋಗ್ಯ ಸೇವೆ ಸುಧಾರಣೆಗೆ ಸಚಿವರ ಕ್ರಮಕ್ಕೆ ಸಾರ್ವಜನಿಕರ ಮೆಚ್ಚುಗೆ.

ಸಕಲೇಶಪುರ :ತಾಲೂಕಿನ ನೂತನ ತಾಲೂಕು ಆರೋಗ್ಯಾಧಿಕಾರಿಯಾಗಿ ಡಾ. ಕಿಶೋರ್ ಕುಮಾರ್ ಅವರನ್ನು ಸರ್ಕಾರ ನೇಮಕ ಮಾಡಿದೆ. ಈ ನೇಮಕಾತಿಯಿಂದ ತಾಲೂಕಿನ ಆರೋಗ್ಯ ಸೇವೆಯಲ್ಲಿ ಹೊಸ ಚೈತನ್ಯ ಮೂಡುವ ನಿರೀಕ್ಷೆ ವ್ಯಕ್ತವಾಗಿದೆ.ಈವರೆಗೆ ತಾಲೂಕು ಆರೋಗ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಡಾ. ಮಹೇಶ್ ಅವರು ಸುಮಾರು ಹತ್ತು ವರ್ಷಗಳಿಗೂ ಅಧಿಕ ಅವಧಿಯಿಂದ ಅದೇ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ದೀರ್ಘಾವಧಿಯ ಸೇವೆಯ ಹಿನ್ನೆಲೆಯಲ್ಲಿ ಆಡಳಿತಾತ್ಮಕ ಕಾರಣಗಳಿಂದ ಅವರ ವರ್ಗಾವಣೆಗೆ ಸಾರ್ವಜನಿಕ ವಲಯದಲ್ಲಿ ಒತ್ತಾಯಗಳು ಕೇಳಿಬಂದಿದ್ದವು.ಇತ್ತೀಚೆಗೆ ಆರೋಗ್ಯ ಸಚಿವ ಯು.ಟಿ. ಖಾದರ್ ಅವರು ಸಕಲೇಶಪುರದ ಕ್ರಾಫರ್ಡ್ ಆಸ್ಪತ್ರೆಗೆ ಭೇಟಿ ನೀಡಿ, ತಡರಾತ್ರಿ 2.30ರವರೆಗೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದರು. ಆಸ್ಪತ್ರೆಯಲ್ಲಿನ ಮೂಲಸೌಕರ್ಯ, ವೈದ್ಯಕೀಯ ಸೇವೆಗಳ ಗುಣಮಟ್ಟ, ಸಿಬ್ಬಂದಿ ಸಮಸ್ಯೆಗಳು ಹಾಗೂ ಸಾರ್ವಜನಿಕರಿಗೆ ಲಭ್ಯವಾಗುತ್ತಿರುವ ಆರೋಗ್ಯ ಸೇವೆಗಳ ಕುರಿತು ಸಮಗ್ರ ಪರಿಶೀಲನೆ ನಡೆಸಿ ಅಗತ್ಯ ಸೂಚನೆಗಳನ್ನು ನೀಡಿದ್ದರು.ಈ ಬೆಳವಣಿಗೆಯ ಬೆನ್ನಲ್ಲೇ ಆಲೂರು ತಾಲೂಕು ಆಸ್ಪತ್ರೆಯ ಆಡಳಿತಾಧಿಕಾರಿಯಾಗಿದ್ದ ಡಾ. ಕಿಶೋರ್ ಕುಮಾರ್ ಅವರನ್ನು ಸಕಲೇಶಪುರ ತಾಲೂಕು ಆರೋಗ್ಯಾಧಿಕಾರಿಯಾಗಿ ನೇಮಕ ಮಾಡಲಾಗಿದೆ.ಸರ್ಕಾರದ ಈ ಕ್ರಮವನ್ನು ಸಾರ್ವಜನಿಕರು ಸ್ವಾಗತಿಸಿದ್ದು, ನೂತನ ಆರೋಗ್ಯಾಧಿಕಾರಿಯ ನೇತೃತ್ವದಲ್ಲಿ ಸರ್ಕಾರಿ ಆಸ್ಪತ್ರೆಗಳ ಕಾರ್ಯವೈಖರಿ ಇನ್ನಷ್ಟು ಸುಧಾರಿಸಿ, ಗ್ರಾಮೀಣ ಪ್ರದೇಶದ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ದೊರೆಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕರ ನಿರೀಕ್ಷೆಗೆ ತಕ್ಕಂತೆ ಆರೋಗ್ಯ ಇಲಾಖೆಯಲ್ಲಿ ಪರಿಣಾಮಕಾರಿ ಆಡಳಿತ ಮತ್ತು ಉತ್ತಮ ಸೇವೆ ಒದಗಿಸುವ ಜವಾಬ್ದಾರಿ ನೂತನ ಅಧಿಕಾರಿಯ ಮೇಲಿದೆ.

Leave a Reply

Your email address will not be published. Required fields are marked *

error: Content is protected !!