
ಸಕಲೇಶಪುರ,: ಕಾಡಾನೆ ಹಾವಳಿಯಿಂದ ಬೆಳೆ ನಷ್ಟಕ್ಕೊಳಗಾದ ರೈತರಿಗೆ ಬಾಕಿ ಉಳಿದಿರುವ ಬೆಳೆ ಪರಿಹಾರವನ್ನು ತಕ್ಷಣ ಬಿಡುಗಡೆ ಮಾಡಬೇಕು ಹಾಗೂ ವಳಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿರಂತರವಾಗಿ ಹಾವಳಿ ನಡೆಸುತ್ತಿರುವ ಒಂಟಿ ಕಾಡಾನೆಯನ್ನು ತುರ್ತಾಗಿ ಸೆರೆ ಹಿಡಿದು ಸ್ಥಳಾಂತರಿಸಬೇಕು ಎಂದು ಒತ್ತಾಯಿಸಿ ವಳಲಹಳ್ಳಿ ಗ್ರಾಮ ಪಂಚಾಯಿತಿ ಬೆಳೆಗಾರರ ಸಂಘದ ವತಿಯಿಂದ ಹಾಸನ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಎಫ್‌ಒ) ಸೌರಭ್ ಕುಮಾರ್ ಅವರಿಗೆ ಮನವಿ ಸಲ್ಲಿಸಲಾಯಿತು.ವಳಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಮಾರು 14 ಗ್ರಾಮಗಳಲ್ಲಿ ಸಾವಿರಕ್ಕೂ ಅಧಿಕ ಕುಟುಂಬಗಳು ಕಾಫಿ, ಅಡಿಕೆ, ಮೆಣಸು ಹಾಗೂ ಭತ್ತದ ಕೃಷಿಯನ್ನೇ ಅವಲಂಬಿಸಿ ಜೀವನ ಸಾಗಿಸುತ್ತಿವೆ. ಕಳೆದ ಹಲವು ವರ್ಷಗಳಿಂದ ಕಾಡಾನೆಗಳ ಹಾವಳಿ ವಿಪರೀತವಾಗಿ ಹೆಚ್ಚಾಗಿದ್ದು, ಕಾಫಿ ತೋಟಗಳು, ಭತ್ತದ ಗದ್ದೆಗಳು ಹಾಗೂ ಇತರ ಕೃಷಿ ಬೆಳೆಗಳಿಗೆ ಅಪಾರ ಪ್ರಮಾಣದ ಹಾನಿಯಾಗುತ್ತಿದೆ. ಇದರಿಂದ ರೈತರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಕೃಷಿ ಚಟುವಟಿಕೆಗಳನ್ನು ಮುಂದುವರಿಸುವುದೇ ದುಸ್ತರವಾಗಿದೆ ಎಂದು ಸಂಘದ ಪದಾಧಿಕಾರಿಗಳು ಡಿಎಫ್‌ಒ ಅವರಿಗೆ ಮನವರಿಕೆ ಮಾಡಿಕೊಟ್ಟರು.ಕಾಡಾನೆ ಹಾವಳಿಯಿಂದ ಬೆಳೆ ನಷ್ಟಕ್ಕೊಳಗಾದ ಅನೇಕ ರೈತರು ನಿಯಮಾನುಸಾರ ಅರ್ಜಿ ಸಲ್ಲಿಸಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆಯನ್ನೂ ನಡೆಸಿದ್ದಾರೆ. ಆದಾಗ್ಯೂ ಹಲವಾರು ರೈತರ ಬೆಳೆ ಪರಿಹಾರದ ಮೊತ್ತ ಇನ್ನೂ ಬಿಡುಗಡೆಯಾಗದೆ ಬಾಕಿ ಉಳಿದಿದೆ. ಇದರಿಂದ ಸಂಕಷ್ಟ ಮತ್ತಷ್ಟು ಹೆಚ್ಚಾಗಿದ್ದು, ಅರ್ಹ ರೈತರ ಬ್ಯಾಂಕ್ ಖಾತೆಗಳಿಗೆ ಬಾಕಿ ಉಳಿದಿರುವ ಪರಿಹಾರವನ್ನು ತಕ್ಷಣ ಜಮಾ ಮಾಡಬೇಕು ಎಂದು ಸಂಘದವರು ಒತ್ತಾಯಿಸಿದರು.ಇದೇ ವೇಳೆ, ಈ ಭಾಗದಲ್ಲಿ ಹಲವು ತಿಂಗಳುಗಳಿಂದ ಒಂಟಿ ಕಾಡಾನೆ ನಿರಂತರವಾಗಿ ಕಾಫಿ ತೋಟಗಳು, ಭತ್ತದ ಗದ್ದೆಗಳು ಹಾಗೂ ಮನೆಗಳ ಸಮೀಪ ಹಾವಳಿ ನಡೆಸುತ್ತಿದೆ. ಕೆಲವು ರೈತರು ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದು, ಗ್ರಾಮಸ್ಥರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಯಾವುದೇ ಅನಾಹುತ ಸಂಭವಿಸುವ ಮುನ್ನವೇ ಆನೆಯನ್ನು ಸೆರೆ ಹಿಡಿದು ಸುರಕ್ಷಿತವಾಗಿ ಸ್ಥಳಾಂತರಿಸಬೇಕು ಎಂದು ಆಗ್ರಹಿಸಲಾಯಿತು.
