ಹೇಮಾವತಿ ಮುಳುಗಡೆ ಭೂ ಹಂಚಿಕೆ ಅಕ್ರಮ: ಸಮಗ್ರ ತನಿಖೆಗೆ ಕೆ ಆರ್ ಎಸ್ ಪಕ್ಷ ಆಗ್ರಹ

ಹೇಮಾವತಿ ಮುಳುಗಡೆ ಭೂ ಹಂಚಿಕೆ ಅಕ್ರಮ: ಸಮಗ್ರ ತನಿಖೆಗೆ ಕೆಆರ್‌ಎಸ್ ಪಕ್ಷ ಆಗ್ರಹ

ಸಕಲೇಶಪುರ, ಜು.23: ಹೇಮಾವತಿ ಜಲಾಶಯ ಮುಳುಗಡೆ ಪ್ರದೇಶದ ಭೂಸಂತ್ರಸ್ತರಿಗೆ ಹಂಚಿಕೆ ಮಾಡಲಾದ ಭೂಮಿಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಸಮಗ್ರ ಹಾಗೂ ಪಾರದರ್ಶಕ ತನಿಖೆ ನಡೆಸಿ, ತಪ್ಪಿತಸ್ಥ ಅಧಿಕಾರಿಗಳು ಮತ್ತು ಸಿಬ್ಬಂದಿ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಕೆಆರ್‌ಎಸ್ ಪಕ್ಷ ಒತ್ತಾಯಿಸಿದೆ.ಪಕ್ಷದ ಮುಖಂಡರು ಗುರುವಾರ ಸಕಲೇಶಪುರ ಉಪವಿಭಾಗಾಧಿಕಾರಿ ಕಚೇರಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿ, ಭೂ ಹಂಚಿಕೆ ಪ್ರಕ್ರಿಯೆಯಲ್ಲಿ ನಡೆದಿರುವ ಅಕ್ರಮಗಳ ಕುರಿತು ಸ್ವತಂತ್ರ ತನಿಖೆ ನಡೆಸುವಂತೆ ಆಗ್ರಹಿಸಿದರು.ಮನವಿಯಲ್ಲಿ, ನಿಜವಾದ ಮುಳುಗಡೆ ಸಂತ್ರಸ್ತರ ಅಧಿಕೃತ ಪಟ್ಟಿಯನ್ನು ಸಾರ್ವಜನಿಕರ ಮುಂದಿಡಬೇಕು. ಭೂಮಿ ಪಡೆದ ಪ್ರತಿಯೊಬ್ಬರ ಅರ್ಹತೆಯನ್ನು ಮರುಪರಿಶೀಲನೆ ಮಾಡಬೇಕು. ತನಿಖೆ ಪೂರ್ಣಗೊಳ್ಳುವವರೆಗೆ ಸಂಬಂಧಿತ ದಾಖಲೆಗಳಲ್ಲಿ ಯಾವುದೇ ತಿದ್ದುಪಡಿ ಅಥವಾ ನಾಶವಾಗದಂತೆ ಸೂಕ್ತ ಭದ್ರತಾ ಕ್ರಮ ಕೈಗೊಳ್ಳಬೇಕು. ಅರ್ಹ ಸಂತ್ರಸ್ತರಿಗೆ ಅವರ ಹಕ್ಕಿನ ಭೂಮಿಯನ್ನು ನ್ಯಾಯಯುತವಾಗಿ ಹಂಚಿಕೆ ಮಾಡಬೇಕು. ತನಿಖೆಯ ಪ್ರಗತಿ ಹಾಗೂ ಅಂತಿಮ ವರದಿಯನ್ನು ಸಾರ್ವಜನಿಕರಿಗೆ ಬಹಿರಂಗಪಡಿಸಬೇಕು ಎಂದು ಒತ್ತಾಯಿಸಲಾಗಿದೆ.ಹೇಮಾವತಿ ಜಲಾಶಯ ನಿರ್ಮಾಣಕ್ಕಾಗಿ ತಮ್ಮ ಭೂಮಿ ಹಾಗೂ ಜೀವನೋಪಾಯವನ್ನು ಕಳೆದುಕೊಂಡ ಕುಟುಂಬಗಳಿಗೆ ನ್ಯಾಯ ಒದಗಿಸುವುದು ಸರ್ಕಾರದ ನೈತಿಕ ಮತ್ತು ಕಾನೂನುಬದ್ಧ ಹೊಣೆಗಾರಿಕೆಯಾಗಿದೆ. ಹಲವು ವರ್ಷಗಳಿಂದ ನ್ಯಾಯಕ್ಕಾಗಿ ಕಾಯುತ್ತಿರುವ ನೈಜ ಸಂತ್ರಸ್ತರ ಹಿತದೃಷ್ಟಿಯಿಂದ ಈ ಪ್ರಕರಣವನ್ನು ವಿಶೇಷ ಪ್ರಕರಣವಾಗಿ ಪರಿಗಣಿಸಿ ಶೀಘ್ರವೇ ಸಮಗ್ರ ತನಿಖೆ ಕೈಗೊಳ್ಳಬೇಕು ಎಂದು ಕೆಆರ್‌ಎಸ್ ಪಕ್ಷ ಆಗ್ರಹಿಸಿದೆ.ಮನವಿ ಸಲ್ಲಿಸುವ ಸಂದರ್ಭದಲ್ಲಿ ಕೆಆರ್‌ಎಸ್ ಪಕ್ಷದ ಜಿಲ್ಲಾಧ್ಯಕ್ಷ ದೇವರಾಜ್, ಜಿಲ್ಲಾ ಕಾರ್ಯಾಧ್ಯಕ್ಷ ಹಾಗೂ ಸಕಲೇಶಪುರ ತಾಲೂಕು ಉಸ್ತುವಾರಿ ಸಚಿನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಧು, ಜಿಲ್ಲಾ ಕಾರ್ಯದರ್ಶಿ ಪ್ರಕಾಶ್ ಡಿ.ಎಚ್., ಸಂಘಟನಾ ಕಾರ್ಯದರ್ಶಿ ಲಕ್ಷ್ಮಿಗೌಡ, ಇಬ್ರಾಹಿಂ, ತಾಲೂಕು ಅಧ್ಯಕ್ಷ ಯೂನಸ್, ಮುಖಂಡ ತಮ್ಮೇಗೌಡ ಹರಳಹಳ್ಳಿ ಸೇರಿದಂತೆ ಪಕ್ಷದ ಪದಾಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!