ಅನುಮತಿ ಇಲ್ಲದೆ ಆಫ್‌ರೋಡ್‌ಗೆ ಯತ್ನ; ಅರಣ್ಯ ಇಲಾಖೆಯಿಂದ ಕಟ್ಟುನಿಟ್ಟಿನ ಎಚ್ಚರಿಕೆ

ಸಕಲೇಶಪುರ: ಅಗತ್ಯ ಅನುಮತಿಗಳಿಲ್ಲದೆ ಅರಣ್ಯ ಪ್ರದೇಶದಲ್ಲಿ ಆಫ್‌ರೋಡ್ ಚಟುವಟಿಕೆ ನಡೆಸಲು ಮುಂದಾದ ಬೆಂಗಳೂರಿನ ಯುವಕರಿಗೆ ಅರಣ್ಯ ಇಲಾಖೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ.ಆರ್‌ಎಫ್‌ಒ ಹೇಮಂತ್ ಕುಮಾರ್ ಅವರ ನೇತೃತ್ವದಲ್ಲಿ ಅರಣ್ಯ ಸಿಬ್ಬಂದಿಗಳಾದ ಮಹದೇವಪ್ಪ, ದೇವೇಂದ್ರ ಹಾಗೂ ಸೋಮಶೇಖರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಅರಣ್ಯ ಪ್ರದೇಶದಲ್ಲಿ ವನ್ಯಜೀವಿಗಳ ಸಂಚಾರ ಹೆಚ್ಚಿರುವುದರಿಂದ ಆಫ್‌ರೋಡ್ ವಾಹನಗಳ ಸಂಚಾರದಿಂದ ಅವುಗಳ ಸಹಜ ವಾಸಸ್ಥಾನಕ್ಕೆ ತೊಂದರೆಯಾಗುವ ಸಾಧ್ಯತೆ ಇದೆ. ಅಲ್ಲದೆ, ಪರಿಸರಕ್ಕೆ ಹಾನಿಯಾಗುವುದರ ಜೊತೆಗೆ ಪ್ರವಾಸಿಗರು ಹಾಗೂ ಸಾರ್ವಜನಿಕರ ಸುರಕ್ಷತೆಯ ಮೇಲೂ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದರು.ಯಾವುದೇ ಆಫ್‌ರೋಡ್ ಚಟುವಟಿಕೆ ನಡೆಸುವ ಮುನ್ನ ಅರಣ್ಯ ಇಲಾಖೆ, ಪೊಲೀಸ್ ಇಲಾಖೆ, ಗ್ರಾಮ ಪಂಚಾಯಿತಿ ಹಾಗೂ ಆರ್‌ಟಿಒ ಸೇರಿದಂತೆ ಸಂಬಂಧಿತ ಇಲಾಖೆಗಳ ಅಗತ್ಯ ಅನುಮತಿ (ಎನ್‌ಒಸಿ) ಮತ್ತು ದಾಖಲೆಗಳನ್ನು ಕಡ್ಡಾಯವಾಗಿ ಪಡೆದುಕೊಳ್ಳಬೇಕು ಎಂದು ಸೂಚಿಸಿದರು.ಅರಣ್ಯ ಸಿಬ್ಬಂದಿಗಳು ಯುವಕರಿಗೆ ಪರಿಸರ ಸಂರಕ್ಷಣೆ ಹಾಗೂ ವನ್ಯಜೀವಿಗಳ ಮಹತ್ವದ ಕುರಿತು ತಿಳುವಳಿಕೆ ನೀಡಿ, ಅಗತ್ಯ ದಾಖಲೆಗಳನ್ನು ಪಡೆದುಕೊಂಡ ಬಳಿಕವೇ ಮುಂದಿನ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು. ಪರಿಸರ ಮತ್ತು ವನ್ಯಜೀವಿಗಳ ರಕ್ಷಣೆಗೆ ಎಲ್ಲರೂ ಸಹಕರಿಸಬೇಕು ಎಂದು ಅರಣ್ಯ ಇಲಾಖೆ ಮನವಿ ಮಾಡಿದೆ.

Leave a Reply

Your email address will not be published. Required fields are marked *

error: Content is protected !!