
ಸಕಲೇಶಪುರ :ತಾಲ್ಲೂಕಿನ ಕಿರುಹುಣಸೆ ಗ್ರಾಮದಲ್ಲಿ ಒಂಟಿ ಕಾಡಾನೆಗಳಾದ ಭೀಮ ಮತ್ತು ಕ್ಯಾಪ್ಟನ್ ಸಂಚರಿಸುತ್ತಿರುವ ಹಿನ್ನೆಲೆಯಲ್ಲಿ ಸಕಲೇಶಪುರ ವಲಯ ಅರಣ್ಯಾಧಿಕಾರಿ ಹೇಮಂತ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಈ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಗಸ್ತು ಪಾಲಕರಾದ ದೇವರಾಜ್ ಸ್ಥಳೀಯ ಗ್ರಾಮಸ್ಥರು ಹಾಗೂ ಸಾರ್ವಜನಿಕರಿಗೆ ಕಾಡಾನೆಗಳ ಚಲನವಲನದ ಬಗ್ಗೆ ಮಾಹಿತಿ ನೀಡಿ, ಎಚ್ಚರಿಕೆಯಿಂದ ಇರುವಂತೆ ಸೂಚಿಸಿದರು. ಹಾಗೂ ರಾತ್ರಿ ಸಮಯ ಹಾಗೂ ಬೆಳಗಿನ ಜಾವದ ವೇಳೆ ಸಾರ್ವಜನಿಕರು ಹೆಚ್ಚಿನ ಜಾಗರೂಕತೆ ವಹಿಸಬೇಕು ಹಾಗೂ ತೋಟಕ್ಕೆ ತೆರಳುವ ಮುನ್ನ ಅರಣ್ಯ ಇಲಾಖೆಯಿಂದ ಮಾಹಿತಿಯನ್ನು ಪಡೆದು ತೆರಳಬೇಕು ಎಂದು ಮನವಿ ಮಾಡಿದರು.ಕಾಡಾನೆಗಳು ಸಂಚರಿಸುವ ಪ್ರದೇಶಗಳಲ್ಲಿ ಒಂಟಿಯಾಗಿ ಓಡಾಡುವುದನ್ನು ತಪ್ಪಿಸುವುದು, ಅನಿವಾರ್ಯವಿದ್ದಲ್ಲಿ ಎಚ್ಚರಿಕೆಯಿಂದ ಸಂಚರಿಸುವುದು ಹಾಗೂ ಯಾವುದೇ ರೀತಿಯ ಆತಂಕಕಾರಿ ಪರಿಸ್ಥಿತಿ ಕಂಡುಬಂದಲ್ಲಿ ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡುವಂತೆ ಅಧಿಕಾರಿಗಳು ತಿಳಿಸಿದರು.
