
ಹಾಸನ: (ಡಿಸೆಂಬರ್ 5) ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯ ವಿತರಣೆ ಮತ್ತು ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆಗಾಗಿ ಬೃಹತ್ ಸರ್ಕಾರಿ ಸೇವೆಗಳ ಸಮರ್ಪಣಾ ಸಮಾವೇಶವನ್ನು ಡಿಸೆಂಬರ್ 6ರಂದು ನಗರದಲ್ಲಿ ಆಯೋಜಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಹಲವು ಸಚಿವರು ಈ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಅವರು ತಿಳಿಸಿದ್ದಾರೆ.ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಆವರಣದ ವೇದಿಕೆಯಲ್ಲಿ ಬೆಳಿಗ್ಗೆ 11 ಗಂಟೆಗೆ ಕಾರ್ಯಕ್ರಮ ಆರಂಭಗೊಂಡು ಮಧ್ಯಾಹ್ನ 3 ಗಂಟೆಗೆ ಮುಕ್ತಾಯಗೊಳ್ಳಲಿದೆ. ಈ ಸಮಾವೇಶದಲ್ಲಿ ಒಟ್ಟು ₹288 ಕೋಟಿ ವೆಚ್ಚದ 87 ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು. ಇದರಲ್ಲಿ ₹122 ಕೋಟಿ ವೆಚ್ಚದ 22 ಕಾಮಗಾರಿಗಳ ಉದ್ಘಾಟನೆ ಹಾಗೂ ₹166 ಕೋಟಿ ವೆಚ್ಚದ 66 ಕಾಮಗಾರಿಗಳಿಗೆ ಶಂಕುಸ್ಥಾಪನೆ ನಡೆಯಲಿದೆ ಎಂದರು.70 ಸಾವಿರ ಫಲಾನುಭವಿಗಳಿಗೆ ನೆರವುಸಮಾವೇಶದಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಸುಮಾರು 70,000 ಫಲಾನುಭವಿಗಳಿಗೆ ವಿವಿಧ ಯೋಜನೆಗಳ ಅಡಿ ಸೌಲಭ್ಯಗಳನ್ನು ವಿತರಿಸಲಾಗುತ್ತಿದೆ. ದಶಕಗಳಿಂದ ಅಧಿಕೃತ ದಾಖಲೆ ಇಲ್ಲದೆ ತೊಂದರೆ ಅನುಭವಿಸುತ್ತಿದ್ದ ಸುಮಾರು 12,000 ಮಂದಿಗೆ ಜಮೀನಿಗೆ ಸಂಬಂಧಿಸಿದ ಪಹಣಿ, ಟಿಪ್ಪಣಿ ಕಾಪಿ, ಮ್ಯುಟೇಶನ್ ಸೇರಿದಂತೆ ಇತರೆ ಅಧಿಕೃತ ದಾಖಲೆಗಳನ್ನು ವಿತರಿಸಲಾಗುವುದು.50,000 ಕುಟುಂಬಗಳಿಗೆ ಕಂದಾಯ ಇಲಾಖೆಯಿಂದ ನೆರವು ಒದಗಿಸಲಾಗುತ್ತಿದ್ದು, ಕಂದಾಯ ಗ್ರಾಮಗಳನ್ನು ಗುರುತಿಸಿ 4-5 ದಶಕಗಳಿಂದ ವಾಸಿಸುತ್ತಿರುವ 5,000 ನಿವಾಸಿಗಳಿಗೆ ಹಕ್ಕುಪತ್ರಗಳನ್ನು ವಿತರಿಸಲಾಗುವುದು. ಜೊತೆಗೆ, ‘ಇ-ಪೌತಿ ಖಾತೆ ಆಂದೋಲನ’ದ ಅಡಿಯಲ್ಲಿ ಮರಣ ದೃಢೀಕರಣ ಪತ್ರ ಆಧರಿಸಿ ಸುಮಾರು 19 ಲಕ್ಷ ಪಹಣಿ ವಿತರಣೆಯಲ್ಲಿ ಶೇ. 95 ಪ್ರಗತಿ ಸಾಧಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ವಿವರಿಸಿದರು.ಪ್ರಮುಖ ಉದ್ಘಾಟನೆಗಳು:• ನೂತನವಾಗಿ ನಿರ್ಮಿಸಿರುವ ₹ 15 ಕೋಟಿ ವೆಚ್ಚದ ಪ್ರಜಾಸೌಧ (ತಾಲ್ಲೂಕು ಕಚೇರಿ).• ಸಕಲೇಶಪುರದ ಮಿನಿ ವಿಧಾನಸೌಧದ ಎರಡು ಹಾಗೂ ಮೂರನೇ ಅಂತಸ್ತಿನ ಕಟ್ಟಡ.• ಒಟ್ಟಾರೆ, ಸುಮಾರು ₹ 300 ಕೋಟಿ ವೆಚ್ಚದ ಕಾಮಗಾರಿಗಳಿಗೆ ಮುಖ್ಯಮಂತ್ರಿ ಚಾಲನೆ ನೀಡಲಿದ್ದಾರೆ. ಇದು ಜಿಲ್ಲೆಗೆ ಮುಖ್ಯಮಂತ್ರಿಗಳ ಮೂರನೇ ಭೇಟಿಯಾಗಿದೆ.ಕಂದಾಯ ಇಲಾಖೆಯಲ್ಲಿ ಕ್ರಾಂತಿಕಾರಿ ಬೆಳವಣಿಗೆಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡರ ಮಾರ್ಗದರ್ಶನದಲ್ಲಿ ಕಂದಾಯ ಇಲಾಖೆಯು ಕ್ರಾಂತಿಕಾರಿ ಬೆಳವಣಿಗೆ ಸಾಧಿಸಿದ್ದು, ರಾಜ್ಯದಲ್ಲಿಯೇ ಪ್ರಥಮ ಸ್ಥಾನ ಪಡೆದಿದೆ. ಸರ್ಕಾರಿ ಜಮೀನಿನಲ್ಲಿ ಸಾಗುವಳಿ ಮಾಡುತ್ತಿರುವವರಿಗೆ ಪೋಡಿ ಹಾಗೂ ಇತರೆ ದಾಖಲೆಗಳನ್ನು ಅಧಿಕೃತವಾಗಿ ಒದಗಿಸಲು ಪ್ರಯತ್ನ ಮಾಡಲಾಗಿದೆ. ಈ ನಿಟ್ಟಿನಲ್ಲಿ ಶ್ರಮಿಸಿದ ಗ್ರಾಮ ಲೆಕ್ಕಾಧಿಕಾರಿ, ತಹಶೀಲ್ದಾರ್, ಉಪವಿಭಾಗಾಧಿಕಾರಿ, ಎಡಿಎಲ್‌ಆರ್ ಅವರನ್ನು ಜಿಲ್ಲಾಧಿಕಾರಿ ಅಭಿನಂದಿಸಿದರು.ಶಂಕುಸ್ಥಾಪನೆಗೊಳ್ಳಲಿರುವ ಪ್ರಮುಖ ಯೋಜನೆಗಳು• ಕಾವೇರಿ ನೀರಾವರಿ ನಿಗಮದಡಿ ಚನ್ನರಾಯಪಟ್ಟಣದ ಸುಮಾರು 18 ಕೆರೆಗೆ ನೀರು ತುಂಬಿಸುವ ಯೋಜನೆ.• ಅಲ್ಪಸಂಖ್ಯಾತರ ನಿಗಮದಡಿ ನಾನಾ ಕಟ್ಟಡಗಳ ಶಂಕುಸ್ಥಾಪನೆ.• ಅರಸೀಕೆರೆ ತಾಲೂಕಿನಲ್ಲಿ ಲೋಕೋಪಯೋಗಿ ಇಲಾಖೆಯಡಿ ನಾನಾ ರಸ್ತೆ ಕಾಮಗಾರಿಗಳು.ಸಮಾವೇಶದ ಆವರಣದಲ್ಲಿ ತೋಟಗಾರಿಕೆ, ಕೃಷಿ ಸೇರಿದಂತೆ ವಿವಿಧ ಇಲಾಖೆಗಳ ಸುಮಾರು 15ಕ್ಕೂ ಹೆಚ್ಚು ಮಳಿಗೆಗಳ ಪ್ರದರ್ಶನ ಹಾಗೂ ಮಾರಾಟ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಸಾರ್ವಜನಿಕರಿಗೆ ಅನುಕೂಲವಾಗುವಂತೆ ಸಮಾವೇಶಕ್ಕೆ ಬರಲು 1154 ಸಾರಿಗೆ ಬಸ್ ಹಾಗೂ 250 ಖಾಸಗಿ ವಾಹನಗಳ ಸೌಲಭ್ಯವನ್ನು ನಿಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ತಿಳಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿಆರ್ ಪೂರ್ಣಿಮಾ ಉಪಸ್ಥಿತರಿದ್ದರು.
