








ಅರಣ್ಯ ಇಲಾಖೆ–ಅಗ್ನಿಶಾಮಕ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಅರಣ್ಯ ಬೆಂಕಿ ತಡೆಗೆ ಜನಜಾಗೃತಿ
ಸಕಲೇಶಪುರ : ಅರಣ್ಯ ಇಲಾಖೆ ಹಾಗೂ ಅಗ್ನಿಶಾಮಕ ಇಲಾಖೆಯ ಸಹಭಾಗಿತ್ವದಲ್ಲಿ ಸಕಲೇಶಪುರ ವಲಯದ ಹಾನುಬಾಳು ಶಾಖೆಯ ಹಾನುಬಾಳು ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಅರಣ್ಯ ಬೆಂಕಿ ತಡೆಗಟ್ಟುವ ಕುರಿತು ಸಾರ್ವಜನಿಕರಿಗೆ ಪ್ರಾತ್ಯಕ್ಷತೆ ನಡೆಸಿ ಅರಿವು ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಅರಣ್ಯ ಪ್ರದೇಶಗಳು ಹಾಗೂ ಹಿಡುವಳಿ ಜಾಗಗಳಲ್ಲಿ ಅಜಾಗರೂಕತೆಯಿಂದ ಬೆಂಕಿ ಹಚ್ಚುವುದರಿಂದ ಉಂಟಾಗುವ ಅಪಾಯಗಳು, ಪರಿಸರ ಹಾಗೂ ಜೀವ ವೈವಿಧ್ಯಕ್ಕೆ ಆಗುವ ಹಾನಿ ಕುರಿತು ವಿವರಿಸಲಾಯಿತು. ಬೆಂಕಿ ಸಂಭವಿಸದಂತೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳು ಹಾಗೂ ಬೆಂಕಿ ಬಿದ್ದಲ್ಲಿ ಕೈಗೊಳ್ಳಬೇಕಾದ ತಕ್ಷಣದ ಕ್ರಮಗಳ ಬಗ್ಗೆ ಅಗ್ನಿಶಾಮಕ ಸಿಬ್ಬಂದಿ ಪ್ರಾತ್ಯಕ್ಷತೆಯ ಮೂಲಕ ತಿಳಿಸಿದರು.
ಇದೇ ದಿನ ಸಕಲೇಶಪುರ ಪ್ರಾದೇಶಿಕ ಅರಣ್ಯ ವಲಯ, ಅಗ್ನಿಶಾಮಕ ಇಲಾಖೆ ಹಾಗೂ ಗ್ರಾಮೀಣ ಪಂಚಾಯಿತಿ ಅಭಿವೃದ್ಧಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಮಾರನಹಳ್ಳಿ ಶಾಖೆಯ ಕಾಡುಮನೆ ಗಸ್ತಿನ ಸರ್ಕಾರಿ ಪ್ರೌಢಶಾಲೆ, ಮಾರನಹಳ್ಳಿಯಲ್ಲಿ ತಾಲೂಕು ವ್ಯಾಪ್ತಿಯ ಅರಣ್ಯ ಪ್ರದೇಶಗಳು ಮತ್ತು ಹಿಡುವಳಿ ಜಾಗಗಳಲ್ಲಿ ಬೆಂಕಿ ಹಾಕದಂತೆ ಸಾರ್ವಜನಿಕರು, ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳಿಗೆ ಜನಜಾಗೃತಿ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿತ್ತು .
ಕಾರ್ಯಗಾರದಲ್ಲಿ ಬೆಂಕಿ ಹಚ್ಚುವುದರಿಂದ ಉಂಟಾಗುವ ಅನಾಹುತಗಳು, ಅರಣ್ಯ ಸಂರಕ್ಷಣೆ ಎಲ್ಲರ ಹೊಣೆ ಎಂಬ ಸಂದೇಶವನ್ನು ಸಾರಲಾಯಿತು. ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಅರಣ್ಯ ಬೆಂಕಿ ತಡೆಗೆ ಸಹಕಾರ ನೀಡುವಂತೆ ಅಧಿಕಾರಿಗಳು ಮನವಿ ಮಾಡಿದರು.
ಈ ಕಾರ್ಯಕ್ರಮದಲ್ಲಿ ಅಗ್ನಿಶಾಮಕ ಇಲಾಖೆಯ ಸಹಾಯಕ ಠಾಣಾ ಅಧಿಕಾರಿ ಸಿ.ಪಿ. ಉಮಾ ಮಹೇಶ್, ಅಗ್ನಿಶಾಮಕ ಸಿಬ್ಬಂದಿಗಳಾದ ಮುರಳಿಧರ್,ನವೀನ್ ಕುಮಾರ್, ಖಾದರ್ ಸಾಬ್, ಬಸವಲಿಂಗಯ್ಯ ಹಾಗೂ ಚಾಲಕ ಮಹಮ್ಮದ್ ಇಸಾಕ್ ತಹಸಿಲ್ದಾರ್ ಮತ್ತು ವಲಯ ಅರಣ್ಯಾಧಿಕಾರಿ ಹೇಮಂತ್ ಕುಮಾರ್, ಅರಣ್ಯ ಇಲಾಖೆಯ ಸಿಬ್ಬಂದಿಗಳು ಹಾಗೂ ಗ್ರಾಮಪಂಚಾಯತಿ ಪ್ರತಿನಿಧಿಗಳು, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
