
ಸಕಲೇಶಪುರ: ತಾಲೂಕಿನ ಕರಗೂರು ಕೂಡಿಗೆ ಗ್ರಾಮದಲ್ಲಿ ನೂತನವಾಗಿ ನಿರ್ಮಾಣ ಆಗುತ್ತಿರುವ ” ಶ್ರೀ ವಾಯುಪುತ್ರ ದೇವಾಲಯಕ್ಕೆ ಶ್ರೀ ಕ್ಷೇತ್ರದ ಪರಮಪೂಜ್ಯ ಡಾ. ಡಿ ವೀರೇಂದ್ರ ಹೆಗಡೆಯವರು ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ರೂ 2,00,000/- ಲಕ್ಷ ರೂಗಳನ್ನು ಅನುದಾನ ಮಂಜೂರುಗೊಳಿಸಿದ್ದು ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷರಾದ ಡಾ.ನವೀನ್ ಚಂದ್ರ ಶೆಟ್ಟಿ ಯವರು ಸಮಿತಿಯವರಿಗೆ ಹಸ್ತಾಂತರಿಸಿದರು.
ನಂತರ ಮಾತನಾಡಿದ ಅವರು ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಎಲ್ಲಾ ದೇವಸ್ಥಾನಗಳಿಗೆ, ಧಾರ್ಮಿಕ ಶ್ರದ್ಧಾ ಕೇಂದ್ರಗಳಿಗೆ ಮಠ ಮಂದಿರಗಳಿಗೆ ಸಹಾಯ ಹಸ್ತ ನೀಡುವ ಮೂಲಕ ಪುರಾತನ ದೇವಸ್ಥಾನಗಳ ಜೀರ್ಣೋದ್ಧಾರ, ಭಜನಾ ಮಂಡಳಿಗಳಿಗೆ,ಕಟ್ಟಡ ರಚನೆ, ತರಬೇತಿ ಮತ್ತು ಸ್ವಚ್ಛತಾ ಕಾರ್ಯಕ್ರಮಗಳಿಗೆ ಸಹಾಯ ಮಾಡುತ್ತಿದೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಈ ಪ್ರಯತ್ನಗಳು ಕರ್ನಾಟಕದ ಧಾರ್ಮಿಕ ಕೇಂದ್ರಗಳ ಅಭಿವೃದ್ಧಿಗೆ ಸಹಾಯ ಮಾಡುತ್ತಿವೆ ಮದ್ಯವರ್ಜನ ಶಿಬಿರಗಳು, ವಾತ್ಸಲ್ಯ ಕಿಟ್ ವಿತರಣೆ, ವಾತ್ಸಲ್ಯ ಮನೆ ನಿರ್ಮಾಣ, ನಿರ್ಗತಿಕರಿಗೆ ಮಾಸಾಶನ, ಜ್ಞಾನದೀಪ ಶಿಕ್ಷಣ ಕಾರ್ಯಕ್ರಮಗಳು, ಕೆರೆ ಹೂಳೆತ್ತುವುದು, ಸರ್ಕಾರಿ ಶಾಲೆಗಳಿಗೆ ಅನುದಾನ ನೀಡುವಂತಹ ಹತ್ತು ಹಲವಾರು ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾ ಬರುತ್ತಿದ್ದು ನಾವೆಲ್ಲರೂ ಈ ನಿಟ್ಟಿನಲ್ಲಿ ಸಮಾಜದ ಸ್ವಾಸ್ಥ್ಯ ನಿರ್ಮಾಣದಲ್ಲಿ ಪೂಜ್ಯರೊಂದಿಗೆ ಕೈ ಜೋಡಿಸಬೇಕು ಪ್ರತಿ ಹಳ್ಳಿ ಹಳ್ಳಿಗಳಲ್ಲಿ ಭಜನೆಗಳಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಯುವಜನತೆಗೆ ಸಂಸ್ಕೃತಿ, ಸಂಸ್ಕಾರದ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ದುಶ್ಚಟ ಮುಕ್ತ ಸಮಾಜ ನಿರ್ಮಾಣಕ್ಕೆ ನಾವೆಲ್ಲರೂ ಕಟಿಬದ್ಧರಾಗಿ ಶ್ರಮಿಸಬೇಕು ಎಂದರು. ದೇವಸ್ಥಾನದ ನಿರ್ಮಾಣ ಕೆಲಸ ಬಹಳ ಪುಣ್ಯ ಕೆಲಸ ಇಂತಹ ಸ್ಥಳಗಳಲ್ಲಿ ನಿರಂತರವಾಗಿ ಧಾರ್ಮಿಕ ಆಚರಣೆಗಳು ಹಾಗೂ ಮಕ್ಕಳಿಗೆ ಉತ್ತಮ ಸಂಸ್ಕಾರಯುತ ಶಿಕ್ಷಣ, ಯೋಗ, ಧ್ಯಾನಗಳನ್ನು ಕಲಿಸಿಕೊಡುವ ಕೇಂದ್ರಗಳು ಹೆಚ್ಚಾಗಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ತಾಲೂಕಿನ ಯೋಜನಾಧಿಕಾರಿಗಳಾದ ರಾಜೇಶ.ಎಂ, ಸಮಿತಿಯ ಅಧ್ಯಕ್ಷರಾದ ಲೋಲಾಕ್ಷ ,ಮತ್ತು ಪದಾಧಿಕಾರಿಗಳು, ಊರಿನ ಗಣ್ಯರು, ಒಕ್ಕೂಟ ಅಧ್ಯಕ್ಷರು, ಪದಾಧಿಕಾರಿಗಳು, ಸಂಘದ ಸದಸ್ಯರು, ವಲಯದ ಮೇಲ್ವಿಚಾರಕರು,ಸೇವಾ ಪ್ರತಿನಿಧಿ ರವರು ಮತ್ತು ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.
