
ಸಕಲೇಶಪುರ: ಶಿಕ್ಷಣದ ಮೂಲಕ ಸಮಾಜದ ಅಭಿವೃದ್ಧಿಗೆ ಕೈಜೋಡಿಸುವ ಉದ್ದೇಶದಿಂದ ವಿದ್ಯಾರ್ಥಿ ವಿದ್ಯಾದಾನ ಫ್ರೆಂಡ್ಸ್ ಗ್ರೂಪ್ ವತಿಯಿಂದ ಉದೇವಾರ ಸರ್ಕಾರಿ ಪ್ರೌಢಶಾಲೆ ಹಾಗೂ ಬಾಳೆಗದ್ದೆಯ ಎಸ್. ಮಾನಸ ಪ್ರೌಢಶಾಲೆಯ ಸುಮಾರು 150 ವಿದ್ಯಾರ್ಥಿಗಳಿಗೆ ಉಚಿತ ಕಲಿಕಾ ಸಾಮಗ್ರಿಗಳನ್ನು ವಿತರಿಸಲಾಯಿತು.ಕಳೆದ ಐದು ವರ್ಷಗಳಿಂದ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಅಗತ್ಯ ಕಲಿಕಾ ಸಾಮಗ್ರಿಗಳನ್ನು ವಿತರಿಸುತ್ತಾ ಬರುತ್ತಿರುವ ವಿದ್ಯಾರ್ಥಿ ವಿದ್ಯಾದಾನ ಫ್ರೆಂಡ್ಸ್ ಗ್ರೂಪ್, ಈ ವರ್ಷವೂ ತನ್ನ ಸಾಮಾಜಿಕ ಕಳಕಳಿಯನ್ನು ಮುಂದುವರಿಸಿ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಕಾರ್ಯ ಕೈಗೊಂಡಿದೆ. ಉದ್ಯಮಿಗಳಾದ ಲೋಹಿತ್(MRF), ಕೃತಿಕ್ ಹಾಗೂ ಕೌಶಿಕ್ ಅವರು ತಮ್ಮ ಆಧಾಯದ ಒಂದು ಭಾಗವನ್ನು ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಮೀಸಲಿಟ್ಟು ಈ ಸೇವಾ ಕಾರ್ಯವನ್ನು ನಿರಂತರವಾಗಿ ನಡೆಸುತ್ತಿದ್ದಾರೆ.ಕಾರ್ಯಕ್ರಮದಲ್ಲಿ ಮಾತನಾಡಿದ ಬಾಳೆಗದ್ದೆಯ ಎಸ್. ಮಾನಸ ಪ್ರೌಢಶಾಲೆಯ ಮುಖ್ಯ ಶಿಕ್ಷಕ ದೇವರಾಜ್, “ವಿದ್ಯಾರ್ಥಿ ವಿದ್ಯಾದಾನ ಫ್ರೆಂಡ್ಸ್ ಗ್ರೂಪ್ ಪ್ರತಿವರ್ಷವೂ ನಮ್ಮ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ಕಲಿಕಾ ಸಾಮಗ್ರಿಗಳನ್ನು ವಿತರಿಸುತ್ತಿದ್ದು, ಶಾಲೆಯ ಅಭಿವೃದ್ಧಿಗೂ ಸಹಕಾರ ನೀಡುತ್ತಿದೆ. ತಾಲೂಕಿನ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ವಿದ್ಯಾರ್ಥಿಗಳಿಗೆ ಈ ರೀತಿಯ ನೆರವು ನೀಡುತ್ತಿರುವುದು ಅವರ ಸಾಮಾಜಿಕ ಬದ್ಧತೆಗೆ ಸಾಕ್ಷಿಯಾಗಿದೆ. ಇಂತಹ ಸೇವಾ ಮನೋಭಾವ ನಿಜಕ್ಕೂ ಶ್ಲಾಘನೀಯ,” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಉದೇವಾರ ಸರ್ಕಾರಿ ಪ್ರೌಢಶಾಲೆಯ ಸಹಶಿಕ್ಷಕ ಸುಬ್ರಮಣಿ ಎಚ್.ಕೆ. ಮಾತನಾಡಿ, “ವಿದ್ಯಾರ್ಥಿ ವಿದ್ಯಾದಾನ ಫ್ರೆಂಡ್ಸ್ ಗ್ರೂಪ್ ಪ್ರತಿ ವರ್ಷವೂ ಸರ್ಕಾರಿ ಶಾಲಾ ಮಕ್ಕಳಿಗೆ ಕಲಿಕಾ ಸಾಮಗ್ರಿಗಳನ್ನು ವಿತರಿಸುವ ಮೂಲಕ ಶಿಕ್ಷಣಕ್ಕೆ ಉತ್ತೇಜನ ನೀಡುತ್ತಿದೆ. ಇಂತಹ ಸಮಾಜಮುಖಿ ಕಾರ್ಯಗಳು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಬೆಳೆಸುವುದರ ಜೊತೆಗೆ ಉತ್ತಮ ಸಾಧನೆಗೆ ಪ್ರೇರಣೆಯಾಗುತ್ತವೆ. ದಾನಿಗಳ ಸೇವಾ ಮನೋಭಾವ ಇನ್ನಷ್ಟು ವಿಸ್ತರಿಸಿ ಹೆಚ್ಚಿನ ಮಕ್ಕಳ ಭವಿಷ್ಯ ಉಜ್ವಲಗೊಳ್ಳಲಿ,” ಎಂದು ಆಶಿಸಿದರು.ದಾನಿಗಳ ಪರವಾಗಿ ಮಾತನಾಡಿದ ಲೋಹಿತ್(MRF), “ನಾವೂ ಸರ್ಕಾರಿ ಶಾಲೆಯಲ್ಲೇ ವಿದ್ಯಾಭ್ಯಾಸ ಮಾಡಿ ಇಂದು ಉದ್ಯಮಿಗಳಾಗಿದ್ದೇವೆ. ಸರ್ಕಾರಿ ಶಾಲೆಗಳು ಯಾವುದೇ ಖಾಸಗಿ ಶಾಲೆಗಳಿಗಿಂತ ಕಡಿಮೆಯಿಲ್ಲ ಎಂಬುದನ್ನು ವಿದ್ಯಾರ್ಥಿಗಳು ತಮ್ಮ ಸಾಧನೆಗಳ ಮೂಲಕ ಸಾಬೀತುಪಡಿಸಿದ್ದಾರೆ. ಸರ್ಕಾರಿ ಶಾಲೆಗಳ ಬಗ್ಗೆ ಸಮಾಜದಲ್ಲಿ ಇನ್ನಷ್ಟು ವಿಶ್ವಾಸ ಮೂಡಿಸುವ ಹಾಗೂ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ನಮ್ಮ ಫ್ರೆಂಡ್ಸ್ ಗ್ರೂಪ್ ಈ ಸೇವಾ ಕಾರ್ಯವನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ,” ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಉದೇವಾರ ಸರ್ಕಾರಿ ಪ್ರೌಢಶಾಲೆಯ ಸಹಶಿಕ್ಷಕರಾದ ವೇದಾವತಿ ಎಚ್.ಎಸ್., ಸುಮಾ ಉಡುಪ, ಸದಾಶಿವ ಪೂಜಾರಿ ಹಾಗೂ ಎಸ್. ಮಾನಸ ಪ್ರೌಢಶಾಲೆಯ ಸಹಶಿಕ್ಷಕರಾದ ರಾಘವೇಂದ್ರ, ದಿನೇಶ್ ಬಿ.ಎಂ., ನಾಗರಾಜ್ ಎಂ.ಬಿ., ರುದ್ರಪ್ಪ ಎ.ಕೆ., ನಾಗರತ್ನಮ್ಮ ಎಚ್.ಪಿ., ಸುಧಾಕರ್ ಸೇರಿದಂತೆ ಶಾಲಾ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಚಿತ್ರ: ವಿದ್ಯಾರ್ಥಿ ವಿದ್ಯಾದಾನ ಫ್ರೆಂಡ್ಸ್ ಗ್ರೂಪ್ ವತಿಯಿಂದ ಉದೇವರ ಹಾಗೂ ಬಾಳೆಗದ್ದೆ ಶಾಲೆಗಳ ವಿದ್ಯಾರ್ಥಿಗಳಿಗೆ ಉಚಿತ ಕಲಿಕಾ ಸಾಮಗ್ರಿಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಶಿಕ್ಷಕರು, ದಾನಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.



