ಬೆಟ್ಟದ ಭೈರವೇಶ್ವರ ದೇವಾಲಯದಲ್ಲಿ ಜಾಗೃತಿ ಬ್ಯಾನರ್ ಅಳವಡಿಕೆ

ಸಕಲೇಶಪುರ: ತಾಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಬೆಟ್ಟದ ಭೈರವೇಶ್ವರ ದೇವಾಲಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರುವ ಭಕ್ತರು ಹಾಗೂ ಪ್ರವಾಸಿಗರ ಅನುಕೂಲಕ್ಕಾಗಿ ಗ್ರಾಮಾಂತರ ಪೊಲೀಸ್ ಠಾಣೆ ವತಿಯಿಂದ ಜಾಗೃತಿ ಮೂಡಿಸುವ ಬ್ಯಾನರ್‌ಗಳನ್ನು ಅಳವಡಿಸಲಾಯಿತು. ದೇವಾಲಯದ ಆವರಣದಲ್ಲಿ ಸ್ವಚ್ಛತೆ ಕಾಪಾಡುವ ಉದ್ದೇಶದಿಂದ “ಪಾದರಕ್ಷೆಗಳನ್ನು ಹೊರಗೆ ಬಿಡಿ, ಸ್ವಚ್ಛತೆ ಕಾಪಾಡಿ”, “ಸಂಯಮದಿಂದ ವರ್ತಿಸಿ”, “ಬೆಲೆಬಾಳುವ ವಸ್ತುಗಳ ಬಗ್ಗೆ ಎಚ್ಚರಿಕೆ ವಹಿಸಿ” ಹಾಗೂ “ವಾಹನಗಳನ್ನು ನಿಗದಿತ ಸ್ಥಳದಲ್ಲೇ ನಿಲುಗಡೆ ಮಾಡಿ” ಎಂಬ ಸಂದೇಶಗಳಿರುವ ಬ್ಯಾನರ್‌ಗಳನ್ನು ಅಳವಡಿಸಿ ಭಕ್ತರಿಗೆ ಅಗತ್ಯ ಮಾಹಿತಿಯನ್ನು ನೀಡಲಾಯಿತು.ಕಳೆದ ಕೆಲವು ತಿಂಗಳ ಹಿಂದೆ ಫೋಟೋ ಶೂಟಿಂಗ್ ವಿಷಯವಾಗಿ ಸ್ಥಳೀಯರು ಹಾಗೂ ಫೋಟೋಗ್ರಾಫರ್ಸ್ ತಂಡದ ನಡುವೆ ದೇವಸ್ಥಾನದ ನಿಯಮವನ್ನು ಪಾಲನೆ ಮಾಡುವ ವಿಷಯವಾಗಿ ವಾದ ವಿವಾದ ನಡೆದು ಕೊನೆಗೆ ಫೋಟೋಗ್ರಾಫರ್ಸ್ ತಂಡದ ಮೇಲೆ ಹಲ್ಲೆ ನಡೆದಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಜಿಲ್ಲಾಧಿಕಾರಿಗಳು ಫೋಟೋ ಶೂಟಿಂಗ್ ಗೆ ನಿಷೇದ ಹೇರಿದ್ದರು ಹಾಗೂ ಸ್ಥಳೀಯ ಇಬ್ಬರು ವಿನಾಕಾರಣ ಜೈಲು ಪಾಲಾಗುವ ಪರಿಸ್ಥಿತಿ ನಿರ್ಮಾಣವಾಗಿತ್ತು.ಇದೀಗ ಮತ್ತೆ ದೇವಸ್ಥಾನಕ್ಕೆ ಆಗಮಿಸುವ ಪ್ರವಾಸಿಗರು ದೇವಸ್ಥಾನದ ಆವರಣದಲ್ಲೇ ಚಪ್ಪಲಿ ಧರಿಸಿ ತಿರುಗಾಡುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಹಿನ್ನಲೆಯಲ್ಲಿ ಪೊಲೀಸರು ಶಾಂತಿ ಕಾಪಾಡಲು ಕೆಲವು ಕ್ರಮ ಕೈಗೊಂಡಿದ್ದಾರೆ ಈ ಸಂದರ್ಭದಲ್ಲಿ ಗ್ರಾಮಾಂತರ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ಎಎಸ್ಐ ವಿಜಯಕುಮಾರ್, ರಾಜು, ಸುಭಾಷ್ ಬಿರಾದಾರ ಹಾಗೂ ನವೀನ್ ಅವರು ಭಾಗವಹಿಸಿ, ದೇವಾಲಯಕ್ಕೆ ಆಗಮಿಸುವ ಭಕ್ತರು ಹಾಗೂ ಪ್ರವಾಸಿಗರು ನಿಯಮಗಳನ್ನು ಪಾಲಿಸುವ ಮೂಲಕ ಸುಗಮ ಹಾಗೂ ಸುರಕ್ಷಿತ ವಾತಾವರಣ ನಿರ್ಮಾಣಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದರು.ದೇವಾಲಯದ ಪಾವಿತ್ರ್ಯವನ್ನು ಕಾಪಾಡುವುದರ ಜೊತೆಗೆ ಭಕ್ತರ ಸುರಕ್ಷತೆ ಮತ್ತು ಅನುಕೂಲವನ್ನು ಗಮನದಲ್ಲಿಟ್ಟುಕೊಂಡು ಈ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.ಕಾರ್ಯಕ್ರಮದಲ್ಲಿ ಸಾರ್ವಜನಿಕರಾದ ಎತ್ತಿನಹೊಳೆ ಹೇಮಂತ್ ಜೆ.ಎಸ್., ಗ್ರಾಮ ಪಂಚಾಯಿತಿ ಸದಸ್ಯ ಅರವಿಂದ್ ಅಚ್ಚನಹಳ್ಳಿ ಸೇರಿದಂತೆ ಸ್ಥಳೀಯ ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!