
ಸಕಲೇಶಪುರ:- ಸನಾತನ ಸೇವಾ ಟ್ರಸ್ಟ್ (ರಿ) ವತಿಯಿಂದ ಜೂನ್ 11ರಂದು ಗುರುವಾರ ಬೆಳಿಗ್ಗೆ 9.30ರಿಂದ ಮಧ್ಯಾಹ್ನ 2.30ರವರೆಗೆ ಪಟ್ಟಣದ ಪುರಭವನದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ ಬಾಲ್‌ರಾಜ್ ಆರ್. ಕೊಲ್ಲಹಳ್ಳಿ ತಿಳಿಸಿದರು.ಪಟ್ಟಣದ ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸನಾತನ ಸೇವಾ ಟ್ರಸ್ಟ್ ಕಳೆದ ಎರಡು ವರ್ಷಗಳಿಂದ ಸಮಾಜಮುಖಿ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ದೇವಸ್ಥಾನಗಳ ಸ್ವಚ್ಛತೆ, ಶಾಲಾ ಆವರಣಗಳ ಸ್ವಚ್ಛತಾ ಕಾರ್ಯಕ್ರಮ, ಆರೋಗ್ಯ ಶಿಬಿರ ಸೇರಿದಂತೆ ಹಲವು ಜನಪರ ಸೇವಾ ಚಟುವಟಿಕೆಗಳನ್ನು ನಡೆಸುತ್ತಿದೆ ಎಂದರು.ಕಳೆದ ಅಕ್ಟೋಬರ್‌ನಲ್ಲಿ ಜೋಸ್ ಸೆಂಟರ್ ಹಾಗೂ ಬೆಂಗಳೂರು ಕಾವೇರಿ ಆಸ್ಪತ್ರೆಯ ಸಹಯೋಗದಲ್ಲಿ ಆಯೋಜಿಸಿದ್ದ ಉಚಿತ ಮೊಣಕಾಲು ಮತ್ತು ಆರೋಗ್ಯ ತಪಾಸಣಾ ಶಿಬಿರಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರೆತಿದ್ದು, ಇದೀಗ ಮತ್ತೊಂದು ಜನೋಪಯೋಗಿ ಕಾರ್ಯಕ್ರಮವಾಗಿ ಉಚಿತ ನೇತ್ರ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.ಶಿಬಿರದಲ್ಲಿ ಬೇಲೂರಿನ ಖ್ಯಾತ ನೇತ್ರ ತಜ್ಞರಾದ ಡಾ. ಪಾಂಡುರಂಗ ಹಾಗೂ ಡಾ. ಗಿರೀಶ್ ಆರಾಧ್ಯ ಅವರ ನೇತೃತ್ವದಲ್ಲಿ ಶ್ರೀ ಚನ್ನಕೇಶವ ನೇತ್ರಾಲಯದ ವೈದ್ಯಕೀಯ ತಂಡದಿಂದ ಕಣ್ಣಿನ ತಪಾಸಣೆ ನಡೆಸಲಾಗುವುದು ಎಂದು ತಿಳಿಸಿದರು.ಟ್ರಸ್ಟ್ ಸದಸ್ಯ ಜೆ.ವಿ. ಲೋಹಿತ್ ಜಂಬರಡಿ ಮಾತನಾಡಿ, ಸೇವೆಯನ್ನೇ ಗುರಿಯಾಗಿಸಿಕೊಂಡು ಟ್ರಸ್ಟ್ ವಿವಿಧ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದು, ಈ ಶಿಬಿರದ ಮೂಲಕ ಕಣ್ಣಿನ ಸಮಸ್ಯೆಯಿಂದ ಬಳಲುತ್ತಿರುವವರಿಗೆ ನೆರವಾಗುವ ಉದ್ದೇಶ ಹೊಂದಲಾಗಿದೆ ಎಂದರು.ಬಿಪಿಎಲ್ ಕಾರ್ಡ್ ಹೊಂದಿರುವ ಫಲಾನುಭವಿಗಳಿಗೆ ಅಗತ್ಯ ಚಿಕಿತ್ಸಾ ಸೌಲಭ್ಯಗಳನ್ನು ಸಂಪೂರ್ಣ ಉಚಿತವಾಗಿ ಒದಗಿಸಲಾಗುವುದು. ಅಲ್ಲದೆ, ಶಿಬಿರಕ್ಕೆ ಮೊದಲು ಆಗಮಿಸುವ 150 ಮಂದಿಗೆ ಉಚಿತ ಕನ್ನಡಕ ವಿತರಿಸಲಾಗುವುದು ಎಂದು ಮಾಹಿತಿ ನೀಡಿದರು.ಸಕಲೇಶಪುರ ತಾಲ್ಲೂಕಿನ ಕಣ್ಣಿನ ಸಮಸ್ಯೆ ಹೊಂದಿರುವ ಸಾರ್ವಜನಿಕರು ಈ ಶಿಬಿರದ ಸದುಪಯೋಗ ಪಡೆದುಕೊಳ್ಳುವಂತೆ ಅವರು ಮನವಿ ಮಾಡಿದರು.ಪತ್ರಿಕಾಗೋಷ್ಠಿಯಲ್ಲಿ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಹೆಬ್ಬನಹಳ್ಳಿ ಸಂದೇಶ್,ರಘು ಚಂಪಕನಗರ, ಹುಲ್ಲಹಳ್ಳಿ ಜಯೇಂದ್ರ ಕುಮಾರ್,ಕೆ.ಎಂ. ರುದ್ರಶೆಟ್ಟಿ ಉಪಸ್ಥಿತರಿದ್ದರು
