
ಸಕಲೇಶಪುರ:- ಕಾಫಿ ಬೆಳೆಗಾರರ ಸಮಸ್ಯೆಗಳ ವಿಚಾರ ಬಂದಾಗ ಸದಾ ಅವರ ಪರವಾಗಿ ನಿಲ್ಲುವುದಾಗಿ ಹಾಗೂ ಅವರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದು ಪರಿಹಾರ ದೊರಕಿಸಲು ನಿರಂತರ ಪ್ರಯತ್ನ ಮಾಡುವುದಾಗಿ ಬೇಲೂರು ಶಾಸಕ ಹುಲ್ಲಹಳ್ಳಿ ಸುರೇಶ್ ಭರವಸೆ ನೀಡಿದರು.ಪಟ್ಟಣದ ಎಚ್.ಡಿ.ಪಿ.ಎ. ಸಭಾಂಗಣದಲ್ಲಿ ನಡೆದ ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘದ 2026–28ನೇ ಸಾಲಿನ ಪ್ರಥಮ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.ಮಲೆನಾಡಿನ ಕಾಫಿ ಬೆಳೆಗಾರರು ರಾಜ್ಯದ ಆರ್ಥಿಕತೆಗೆ ಮಹತ್ವದ ಕೊಡುಗೆ ನೀಡುತ್ತಿದ್ದು, ಅವರಿಗೆ ಹಿಂದಿನ ದಿನಗಳಲ್ಲಿ ದೊರೆಯುತ್ತಿದ್ದ ಗೌರವ ಹಾಗೂ ಪ್ರೋತ್ಸಾಹವನ್ನು ಮರಳಿ ನೀಡುವ ಅಗತ್ಯವಿದೆ ಎಂದು ಹೇಳಿದರು. ಇತ್ತೀಚಿನ ದಿನಗಳಲ್ಲಿ ಕಾಡಾನೆ ಹಾವಳಿ, ಬೆಳೆ ನಷ್ಟ ಹಾಗೂ ಕೃಷಿ ಸಂಬಂಧಿತ ವಿವಿಧ ಸಮಸ್ಯೆಗಳಿಂದ ಬೆಳೆಗಾರರು ಸಂಕಷ್ಟ ಅನುಭವಿಸುತ್ತಿದ್ದಾರೆ. ಹಾಸನ ಜಿಲ್ಲೆಯ ನಾಲ್ಕು ತಾಲ್ಲೂಕುಗಳ ಬೆಳೆಗಾರರು ಒಗ್ಗಟ್ಟಾಗಿ ತಮ್ಮ ಸಮಸ್ಯೆಗಳನ್ನು ಸರ್ಕಾರದ ಮುಂದೆ ಮಂಡಿಸಿದರೆ ಶೀಘ್ರ ಪರಿಹಾರ ದೊರೆಯಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.ಬೆಳೆಗಾರರ ಅನುಭವ, ಸಲಹೆ ಹಾಗೂ ಸಮಸ್ಯೆಗಳನ್ನು ಸದನದ ಒಳಗೆ ಮತ್ತು ಹೊರಗೆ ಪ್ರಸ್ತಾಪಿಸುವ ಮೂಲಕ ರೈತರ ಹಿತಾಸಕ್ತಿಗೆ ಸಂಬಂಧಿಸಿದ ವಿಷಯಗಳಲ್ಲಿ ಸರ್ಕಾರದ ಗಮನ ಸೆಳೆಯುವ ಕಾರ್ಯವನ್ನು ಮುಂದುವರಿಸುವುದಾಗಿ ಅವರು ತಿಳಿಸಿದರು.ಸಭೆಯಲ್ಲಿ ಎಚ್.ಡಿ.ಪಿ.ಎ. ಮಾಜಿ ಅಧ್ಯಕ್ಷ ಪ್ರಸನ್ನ ಎಂ. ಬಿಟ್ಟೇಶ್ವರ ಮಾತನಾಡಿ, ಕಾರ್ಯಕಾರಿ ಮಂಡಳಿ ಸದಸ್ಯರಿಗೆ ಸಭಾ ಶಿಷ್ಟಾಚಾರ, ಅಧ್ಯಕ್ಷತೆ ವಹಿಸುವ ವಿಧಾನ, ಸಂಸದೀಯ ಕಾರ್ಯವಿಧಾನಗಳು ಹಾಗೂ ಸಂಘಟನಾ ನಿರ್ವಹಣೆಯ ಕುರಿತು ಮಾರ್ಗದರ್ಶನ ನೀಡಿದರು. ಸಂಘಟನೆಯ ಬಲವರ್ಧನೆಗೆ ಶಿಸ್ತುಬದ್ಧ ಸಭೆಗಳು ಮತ್ತು ಸದಸ್ಯರ ಸಕ್ರಿಯ ಭಾಗವಹಿಸುವಿಕೆ ಅತ್ಯಗತ್ಯವಾಗಿದ್ದು, ಪ್ರತಿಯೊಬ್ಬ ಸದಸ್ಯರು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುವ ಮೂಲಕ ಸಂಘದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಕರೆ ನೀಡಿದರು. ಎಲ್ಲಾ ಹೋಬಳಿ ನಿರ್ದೇಶಕರು ಹೊಸ ಉತ್ಸಾಹ ಮತ್ತು ಚೈತನ್ಯದೊಂದಿಗೆ ಕಾರ್ಯನಿರ್ವಹಿಸಿ ಸಂಘಟನೆಯನ್ನು ಇನ್ನಷ್ಟು ಸದೃಢಗೊಳಿಸಬೇಕೆಂದು ಸಲಹೆ ನೀಡಿದರು.ಸಭೆಯ ಅಧ್ಯಕ್ಷತೆ ವಹಿಸಿದ್ದ ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘದ ಅಧ್ಯಕ್ಷ ಅರೇಹಳ್ಳಿ ಮಂಜುನಾಥ್ ಶೆಟ್ಟಿ ಮಾತನಾಡಿ, ತಮ್ಮ ಅಧಿಕಾರಾವಧಿಯಲ್ಲಿ ವರ್ಷಕ್ಕೆ ಕನಿಷ್ಠ ನಾಲ್ಕು ಪ್ರಮುಖ ಕಾರ್ಯಕ್ರಮಗಳನ್ನು ಆಯೋಜಿಸುವ ಉದ್ದೇಶ ಹೊಂದಿರುವುದಾಗಿ ತಿಳಿಸಿದರು. ಕಾಳುಮೆಣಸು ವಿಚಾರ ಸಂಕಿರಣ, ಕಾಫಿ ದಿನಾಚರಣೆ, ಕೃಷಿ ಅಧ್ಯಯನ ಪ್ರವಾಸ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಯೋಜನೆ ರೂಪಿಸಲಾಗಿದೆ ಎಂದರು.ಮುಂದಿನ ವರ್ಷ ಸಂಘ ಸ್ಥಾಪನೆಯಾಗಿ 50 ವರ್ಷಗಳು ಪೂರ್ಣಗೊಳ್ಳಲಿರುವ ಹಿನ್ನೆಲೆಯಲ್ಲಿ ಸುವರ್ಣ ಮಹೋತ್ಸವವನ್ನು ಅದ್ದೂರಿಯಾಗಿ ಆಚರಿಸುವ ಉದ್ದೇಶವಿದ್ದು, ರಾಜ್ಯದ ಮುಖ್ಯಮಂತ್ರಿ ಹಾಗೂ ಡಿ. ವೀರೇಂದ್ರ ಹೆಗ್ಗಡೆ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸುವ ಚಿಂತನೆ ಇದೆ ಹಾಗೂ ಬೆಳೆಗಾರರ ಕಲ್ಯಾಣ ಮತ್ತು ಸಂಘದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದರು.ಸಂಘದ ಉಪಾಧ್ಯಕ್ಷ ಸಚಿನ್ ಹೆತ್ತೂರು ಅವರು ಸಂಘದ ಆದಾಯ-ವೆಚ್ಚದ ವಿವರಗಳನ್ನು ಸದಸ್ಯರ ಮುಂದಿಟ್ಟರು. ಸಭೆಯ ಆರಂಭದಲ್ಲಿ ನೂತನವಾಗಿ ಆಯ್ಕೆಯಾದ ಕಾರ್ಯಕಾರಿ ಮಂಡಳಿ ಸದಸ್ಯರು ಹಾಗೂ ನಿರ್ದೇಶಕರ ಪರಿಚಯ ಕಾರ್ಯಕ್ರಮ ನಡೆಯಿತು.ಇದೇ ಸಂದರ್ಭದಲ್ಲಿ ನಿವೃತ್ತರಾದ ಕಾಫಿ ಮಂಡಳಿಯ ಜಂಟಿ ನಿರ್ದೇಶಕ ನವೀನ್ ಕುಮಾರ್ ಹಾಗೂ ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘದ ಚುನಾವಣಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಕೆ.ಜಿ.ಎಫ್. ಮಾಜಿ ಅಧ್ಯಕ್ಷ ಮೋಹನ್ ಮತ್ತು ಮಾಜಿ ಕಾರ್ಯದರ್ಶಿ ಕೆ.ಬಿ. ಕೃಷ್ಣಪ್ರಸಾದ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.ಕಾರ್ಯಕ್ರಮದಲ್ಲಿ ಗೌರವ ಕಾರ್ಯದರ್ಶಿ ಹೆಗ್ಗೋವೆ ಪುಟ್ಟರಾಜ್, ಖಜಾಂಚಿ ಲೋಕೇಶ್ ಡಿ.ಎಸ್., ಜಂಟಿ ಕಾರ್ಯದರ್ಶಿ ರವಿಕುಮಾರ್ ಹೆಚ್.ಎ., ಸಂಘಟನಾ ಕಾರ್ಯದರ್ಶಿ ಹೆಚ್.ಎಂ. ಮಂಜುನಾಥ್, ಟಿ.ಪಿ. ಸುರೇಂದ್ರ ಕುಮಾರ್, ಪರಮೇಶ್, ಲೋಹಿತ್, ವುಮೆನ್ಸ್ ಕಾಫಿ ಪ್ರಮೋಷನ್ ಕೌನ್ಸಿಲ್ ಅಧ್ಯಕ್ಷೆ ಜಯಶ್ರೀ, ಭೂಮಿಪುತ್ರ ಸಂಘದ ಅಧ್ಯಕ್ಷರು ಸೇರಿದಂತೆ ವಿವಿಧ ತಾಲ್ಲೂಕು ಮತ್ತು ಹೋಬಳಿ ಮಟ್ಟದ ಪದಾಧಿಕಾರಿಗಳು, ಕಾರ್ಯದರ್ಶಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.



