

ಹಡ್ಲಹಳ್ಳಿ ಭೂ ವಿವಾದ: ಉಪವಿಭಾಗಾಧಿಕಾರಿಯಿಂದ ಸ್ಥಳ ಪರಿಶೀಲನೆ
ಸಕಲೇಶಪುರ : ತಾಲೂಕಿನ ಹೆತ್ತೂರು ಹೋಬಳಿಯ ಹಡ್ಲಹಳ್ಳಿ ಗ್ರಾಮದ ಭೂ ವಿವಾದಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಲತಾ ಕುಮಾರಿ ಅವರ ನಿರ್ದೇಶನದ ಮೇರೆಗೆ ಸಕಲೇಶಪುರ ಉಪವಿಭಾಗಾಧಿಕಾರಿ ಹುಲಿಮನೆ ತಿಮ್ಮಣ್ಣ ಹಾಗೂ ತಾಲ್ಲೂಕು ದಂಡಾಧಿಕಾರಿ ಸುಪ್ರಿತಾ ಗ್ರಾಮಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.ಕಳೆದ ವರ್ಷ ಹಾಸನದಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಹಡ್ಲಹಳ್ಳಿ ಗ್ರಾಮಸ್ಥರು ತಮ್ಮ ಗ್ರಾಮದ ಮೂಲ ಸರ್ವೆ ನಂಬರ್, ಗ್ರಾಮಠಾಣ ಜಾಗ ಹಾಗೂ ಸಾರ್ವಜನಿಕ ಬಳಕೆಯ ಭೂಮಿಗೆ ಸಂಬಂಧಿಸಿದ ಸಮಸ್ಯೆಯನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಪ್ರಕರಣವನ್ನು ವಿಶೇಷವಾಗಿ ಪರಿಗಣಿಸಿ ಸ್ಥಳಕ್ಕೆ ಭೇಟಿ ನೀಡಿ ವಾಸ್ತವಾಂಶಗಳನ್ನು ಪರಿಶೀಲಿಸುವಂತೆ ಹಾಗೂ ಉಭಯ ಪಕ್ಷಗಳ ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸಿ ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು.ಅದರಂತೆ ಇಂದು ಗ್ರಾಮಕ್ಕೆ ಭೇಟಿ ನೀಡಿದ ಉಪವಿಭಾಗಾಧಿಕಾರಿಗಳು ಗ್ರಾಮಸ್ಥರು ಹಾಗೂ ಸಂಬಂಧಿತ ಪಕ್ಷಗಳ ಹೇಳಿಕೆಗಳನ್ನು ಆಲಿಸಿ, ಗ್ರಾಮಠಾಣ ಜಾಗ, ಸಾರ್ವಜನಿಕ ಬಳಕೆಯ ಭೂಮಿ ಹಾಗೂ ದಾಖಲೆಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಸಂಗ್ರಹಿಸಿ ಪರಿಶೀಲನೆ ನಡೆಸಿದರು.ಈ ನಡುವೆ ರಿ.ಸ.ನಂ.33ರ ಭೂ ವಿವಾದಕ್ಕೆ ಸಂಬಂಧಿಸಿದಂತೆ ಗ್ರಾಮಸ್ಥರು ಉಪವಿಭಾಗಾಧಿಕಾರಿಗಳಿಗೆ ಪ್ರತ್ಯೇಕ ಮನವಿ ಸಲ್ಲಿಸಿ, ಸಾರ್ವಜನಿಕ ಹಿತಾಸಕ್ತಿಯನ್ನು ಕಾಪಾಡುವಂತೆ ಆಗ್ರಹಿಸಿದರು. ಭೂ ದಾಖಲೆಗಳಲ್ಲಿ ಅಕ್ರಮ ತಿದ್ದುಪಡಿ ನಡೆದಿರುವ ಆರೋಪ ಮಾಡಿರುವ ಗ್ರಾಮಸ್ಥರು, ಸಾರ್ವಜನಿಕ ರಸ್ತೆ, ಬೈರೇದೇವರ ಗುಡಿ, ತೆರೆದ ಬಾವಿ, ಸ್ಮಶಾನ ಹಾಗೂ ಸಾರ್ವಜನಿಕ ಮಾರ್ಗಗಳನ್ನು 2E ಪ್ರಕ್ರಿಯೆ ಮತ್ತು ಅಧಿಕೃತ ನಕ್ಷೆಯಲ್ಲಿ ಸೇರಿಸುವಂತೆ ಒತ್ತಾಯಿಸಿದರು.ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಜಿಲ್ಲಾಧಿಕಾರಿಗಳು, ಉಪವಿಭಾಗಾಧಿಕಾರಿಗಳು, ತಹಶೀಲ್ದಾರರು, ಕಂದಾಯ ನಿರೀಕ್ಷಕರು, ಗ್ರಾಮ ಆಡಳಿತಾಧಿಕಾರಿಗಳು ಹಾಗೂ ಸರ್ವೇ ಅಧಿಕಾರಿಗಳು ಹಲವು ಬಾರಿ ಸ್ಥಳ ಪರಿಶೀಲನೆ ನಡೆಸಿದ್ದು, ಎಲ್ಲಾ ದಾಖಲೆಗಳು ಮತ್ತು ಸಾಕ್ಷ್ಯಾಧಾರಗಳನ್ನು ಪರಿಗಣಿಸಿ ನ್ಯಾಯಸಮ್ಮತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಮನವಿಯಲ್ಲಿ ತಿಳಿಸಿದ್ದಾರೆ.ಹಲವು ವರ್ಷಗಳಿಂದ ಸಾರ್ವಜನಿಕ ಬಳಕೆಯಲ್ಲಿರುವ ಜಾಗಗಳನ್ನು ಸಂರಕ್ಷಿಸಿ ಗ್ರಾಮಠಾಣ ಮತ್ತು ಸಾರ್ವಜನಿಕ ಹಿತಾಸಕ್ತಿಗೆ ಯಾವುದೇ ಧಕ್ಕೆಯಾಗದಂತೆ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದು, ಅಗತ್ಯವಿದ್ದರೆ ಸರ್ಕಾರ ಹಾಗೂ ನ್ಯಾಯಾಲಯದ ಮೂಲಕ ಹೋರಾಟ ಮುಂದುವರಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.ಪರಿಶೀಲನೆ ವೇಳೆ ಕಂದಾಯ ಇಲಾಖೆಯ ಅಧಿಕಾರಿಗಳು, ಗ್ರಾಮಸ್ಥರು ಹಾಗೂ ಸಂಬಂಧಿತ ವ್ಯಕ್ತಿಗಳು ಉಪಸ್ಥಿತರಿದ್ದರು.
