ಅಗ್ರಹಾರ( ನಾಲ್ಕನೇ ವಾರ್ಡ್ ) ನಲ್ಲಿ ಕಸದ ತೀವ್ರ ಸಮಸ್ಯೆ : ಪುರಸಭೆ ಕಸದ ತ್ಯಾಜ್ಯ ವಾಹನ ವಿಳಂಬಕ್ಕೆ ಸಾರ್ವಜನಿಕರ ಆಕ್ರೋಶ

ಅಗ್ರಹಾರ( ನಾಲ್ಕನೇ ವಾರ್ಡ್ ) ನಲ್ಲಿ ಕಸದ ರಾಶಿ : ಪುರಸಭೆ ಕಸದ ತ್ಯಾಜ್ಯ ವಾಹನ ವಿಳಂಬಕ್ಕೆ ಸಾರ್ವಜನಿಕರ ಆಕ್ರೋಶ

ಸಕಲೇಶಪುರ :- ಪಟ್ಟಣದ ನಾಲ್ಕನೇ ವಾರ್ಡ್‌ ವ್ಯಾಪ್ತಿಯ ಅಗ್ರಹಾರ ಬಡಾವಣೆಯಲ್ಲಿ ಮನೆ ಕಸ ವಿಲೇವಾರಿ ವ್ಯವಸ್ಥೆ ಸಮರ್ಪಕವಾಗಿ ನಡೆಯದ ಹಿನ್ನೆಲೆಯಲ್ಲಿ ಸಾರ್ವಜನಿಕರು ತೀವ್ರ ಸಮಸ್ಯೆ ಎದುರಿಸುವಂತಾಗಿದೆ. ಅಲ್ಲದೆ ಈ ಕಸದ ರಾಶಿಯಲ್ಲಿ ದನ -ಕರುಗಳು ಪ್ಲಾಸ್ಟಿಕ್ ತಿನ್ನುತ್ತಿವೆ. ಪ್ರತಿದಿನ ಬೆಳಗ್ಗೆ ಸಮಯಕ್ಕೆ ಸರಿಯಾಗಿ ಪುರಸಭೆಯ ಕಸ ಸಂಗ್ರಹಣಾ ವಾಹನಗಳು ಬಾರದ ಕಾರಣ, ಇಲ್ಲಿನ ನಿವಾಸಿಗಳು ತಮ್ಮ ಮನೆಯ ಕಸವನ್ನು ವಿಲೇವಾರಿ ಮಾಡಲು ಮಧ್ಯಾಹ್ನದವರೆಗೂ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.ಅಗ್ರಹಾರ ವಾರ್ಡ್‌ನಲ್ಲಿ ಕೆಲವು ಮಂದಿ ಕಚೇರಿ ಹಾಗೂ ವಿವಿಧ ಉದ್ಯೋಗಗಳಿಗೆ ತೆರಳುವವರಾಗಿದ್ದು, ಅವರು ಬೆಳಗ್ಗೆ ಸುಮಾರು 9 ಗಂಟೆಯವರೆಗೆ ಮನೆಯಲ್ಲಿರುತ್ತಾರೆ. ಆದರೆ ಆ ಸಮಯದಲ್ಲಿ ಪುರಸಭೆಯ ಕಸ ಸಂಗ್ರಹಣಾ ವಾಹನಗಳು ಬಾರದೆ ಇದ್ದಾಗ, ಅನಿವಾರ್ಯವಾಗಿ ಕೆಲಸಕ್ಕೆ ತೆರಳಬೇಕಾಗುತ್ತದೆ. ನಂತರ ಕಸ ವಿಲೇವಾರಿ ಮಾಡಲು ಸೂಕ್ತ ವ್ಯವಸ್ಥೆ ಇಲ್ಲದೆ ಸಮಸ್ಯೆ ಉಂಟಾಗುತ್ತಿದೆ.ಇದೇ ಪರಿಸ್ಥಿತಿ ಎರಡು-ಮೂರು ದಿನ ಮುಂದುವರಿದಾಗ ಕೆಲವರು ಸಾರ್ವಜನಿಕ ಸ್ಥಳಗಳಲ್ಲಿ ಮನೆಯ ಕಸವನ್ನು ಹಾಕುವಂತಾಗಿದ್ದು, ಇದರಿಂದ ರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕರು, ವಾಹನ ಸವಾರರು ಹಾಗೂ ಸ್ಥಳೀಯ ನಿವಾಸಿಗಳು ತೊಂದರೆ ಅನುಭವಿಸುವಂತಾಗಿದೆ. ಅಲ್ಲದೆ ಪರಿಸರದ ಸ್ವಚ್ಛತೆ ಮೇಲೂ ಪರಿಣಾಮ ಬೀರುವ ಆತಂಕ ಎದುರಾಗಿದೆ.“ಇದೇ ರೀತಿ ನಿರ್ಲಕ್ಷ್ಯ ಮುಂದುವರಿದರೆ ಅಗ್ರಹಾರ ಬಡಾವಣೆ ಕಸದ ಸಮಸ್ಯೆಯಿಂದ ಬಳಲುವಂತಾಗುತ್ತದೆ. ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಪುರಸಭೆ ಇತ್ತ ಗಮನಹರಿಸಿ ಸರಿಯಾದ ಸಮಯಕ್ಕೆ ಕಸ ಸಂಗ್ರಹಣೆ ನಡೆಯುವಂತೆ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!