
ಸಕಲೇಶಪುರದಲ್ಲಿ ಮೊಬೈಲ್ ಕ್ಯಾಂಟಿನ್ ವ್ಯಾಪಾರಿಗಳಿಗೆ ಸ್ಥಳದ ಸಮಸ್ಯೆ: ಪುರಸಭೆ ಕ್ರಮಕ್ಕೆ ಮನವಿ
ಸಕಲೇಶಪುರ :- ಪಟ್ಟಣದಲ್ಲಿ ಕಳೆದ 30–35 ವರ್ಷಗಳಿಂದ ತಿಂಡಿ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿರುವ ಮೊಬೈಲ್ ಕ್ಯಾಂಟಿನ್ ವ್ಯಾಪಾರಿಗಳು ತಮ್ಮ ವ್ಯಾಪಾರಕ್ಕೆ ಸೂಕ್ತ ಸ್ಥಳ ಕಲ್ಪಿಸುವಂತೆ ಪುರಸಭೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.ಈ ಕುರಿತು ಮೊಬೈಲ್ ಕ್ಯಾಂಟಿನ್ ಸಂಘದ ಸದಸ್ಯರು ಮಾತನಾಡಿ, ಹಲವು ವರ್ಷಗಳಿಂದ ಸಕಲೇಶಪುರ ಪಟ್ಟಣದಲ್ಲಿ ಆಹಾರ ಮಳಿಗೆ ನಡೆಸಿಕೊಂಡು ಬರುತ್ತಿದ್ದು, ಈ ಹಿಂದೆ ಮಾಜಿ ಶಾಸಕರಾದ ಹೆಚ್.ಎಂ. ವಿಶ್ವನಾಥ್ ಹಾಗೂ ಹೆಚ್.ಕೆ. ಕುಮಾರಸ್ವಾಮಿ ಅವರಿಗೂ ಮನವಿ ಸಲ್ಲಿಸಿದ್ದರೂ ಯಾವುದೇ ಶಾಶ್ವತ ಪರಿಹಾರ ದೊರಕಿರಲಿಲ್ಲ ಎಂದು ತಿಳಿಸಿದ್ದಾರೆ.ನಂತರ ಹಾಸನ ಜಿಲ್ಲಾಧಿಕಾರಿಗಳಾದ ಶ್ರೀಮತಿ ಲತಾ ಕುಮಾರಿ ಅವರು ಪಟ್ಟಣದಲ್ಲಿದ್ದ ಅಂಗಡಿ-ಮುಂಗಟ್ಟುಗಳನ್ನು ತೆರವುಗೊಳಿಸಿದ ಬಳಿಕ, ಹಾಲಿ ಶಾಸಕರಾದ ಸಿಮೆಂಟ್ ಮಂಜು ಅವರ ಪ್ರಯತ್ನದಿಂದ ಸಕಲೇಶಪುರ ಪುರಸಭೆ ವತಿಯಿಂದ ತಾತ್ಕಾಲಿಕ ವ್ಯವಸ್ಥೆ ಮಾಡಿಕೊಡಲಾಗಿತ್ತು. ಬಳಿಕ ಎಸ್‌ಬಿಐ ಬ್ಯಾಂಕ್ ಮುಂಭಾಗದಲ್ಲಿ ಆಹಾರ ಮಳಿಗೆಗಳಿಗೆ ಸ್ಥಳ ನಿಗದಿ ಮಾಡಲಾಗಿತ್ತು ಎಂದು ತಿಳಿಸಿದ್ದಾರೆ.ಆದರೆ ಇದೀಗ ಕೆಲವರು ನಿಗದಿಪಡಿಸಿದ ಸ್ಥಳದಲ್ಲಿ ಆಹಾರ ಮಳಿಗೆ ನಡೆಸಲು ತಕರಾರು ಮಾಡುತ್ತಿರುವುದರಿಂದ ವ್ಯಾಪಾರಿಗಳಿಗೆ ತೊಂದರೆ ಉಂಟಾಗಿದೆ. ಆದ್ದರಿಂದ ಪುರಸಭೆ ಅಧಿಕಾರಿಗಳು ಮಧ್ಯಪ್ರವೇಶಿಸಿ, ನಿಗದಿಪಡಿಸಿದ ಸ್ಥಳದಲ್ಲಿ ವ್ಯಾಪಾರ ಮಾಡಲು ಅನುಕೂಲ ಮಾಡಿಕೊಡಬೇಕು ಹಾಗೂ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಬೇಕು ಎಂದು ಮೊಬೈಲ್ ಕ್ಯಾಂಟಿನ್ ಸಂಘದ ಸದಸ್ಯರು ಮನವಿ ಮಾಡಿದ್ದಾರೆ.ಈ ಸಂದರ್ಭದಲ್ಲಿ ಬೀದಿಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ವಾಜಿದ್, ಮೊಬೈಲ್ ಕ್ಯಾಂಟೀನ್ ಸಂಘದ ರವಿಕುಮಾರ್, ಉಪಾಧ್ಯಕ್ಷ ಕೃಷ್ಣಮೂರ್ತಿ, ಕಾರ್ಯದರ್ಶಿ ಜಯಣ್ಣ, ಖಜಾಂಚಿ ರಘು, ಸದಸ್ಯರುಗಳಾದ ಪ್ರಸನ್ನ, ಅಕ್ಬರ್, ಕಾರ್ತಿಕ್, ವೆಂಕಟೇಶ್,ಪವಿತ್ರ, ವಿನೋದ,ಭಾಗ್ಯಮ್ಮ, ಮಹಮ್ಮದ್ ಮುಂತಾದವರು ಇದ್ದರು
