

ಸಕಲೇಶಪುರ : ಹಾಸನ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಏಡುಕೊಂಡಲು, ಹಾಸನ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸೌರಭ್ ಕುಮಾರ್ ಹಾಗೂ ಸಕಲೇಶಪುರ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಧುಸೂಧನ್ ಅವರ ನಿರ್ದೇಶನದಂತೆ, ಜಿಲ್ಲಾ ಆನೆ ಕಾರ್ಯಪಡೆ ಹಾಸನ ವತಿಯಿಂದ ಸಕಲೇಶಪುರ ವಲಯಕ್ಕೆ ಎರಡು ದ್ವಿಚಕ್ರ ವಾಹನಗಳನ್ನು ಒದಗಿಸಲಾಗಿದೆ.ಈ ವಾಹನಗಳಿಗೆ ಪೂಜೆ ಸಲ್ಲಿಸಿದ ಬಳಿಕ, ಸಂಬಂಧಿತ ಶಾಖೆಗಳಾದ ಬೆಳಗೋಡು ಮತ್ತು ಬ್ಯಾಕರವಳ್ಳಿ ಉಪವಲಯ ಅರಣ್ಯಾಧಿಕಾರಿಗಳಿಗೆ ಹಸ್ತಾಂತರಿಸಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ಸಕಲೇಶಪುರ ವಲಯ ಅರಣ್ಯಾಧಿಕಾರಿಗಳು, ಆನೆಗಳ ಚಲನವಲನ ಕಂಡುಬರುವ ಪ್ರದೇಶಗಳಲ್ಲಿ ಸಾರ್ವಜನಿಕರಿಗೆ ಸಮಯೋಚಿತ ಮಾಹಿತಿ ನೀಡುವುದು ಹಾಗೂ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸುವುದು ಅತ್ಯಂತ ಅಗತ್ಯವಾಗಿದೆ ಎಂದು ತಿಳಿಸಿದರು.ಹೊಸದಾಗಿ ಒದಗಿಸಲಾದ ದ್ವಿಚಕ್ರ ವಾಹನಗಳು ಆನೆಗಳ ಚಲನವಲನವನ್ನು ತ್ವರಿತವಾಗಿ ಗಮನಿಸಿ, ಗ್ರಾಮಸ್ಥರಿಗೆ ಹಾಗೂ ರೈತರಿಗೆ ಅಗತ್ಯ ಮುನ್ನೆಚ್ಚರಿಕೆ ಮಾಹಿತಿಯನ್ನು ತಲುಪಿಸಲು ಸಹಕಾರಿಯಾಗಲಿವೆ ಎಂದು ಹೇಳಿದರು.ಜಿಲ್ಲಾ ಆನೆ ಕಾರ್ಯಪಡೆಯ ಈ ಕ್ರಮವು ಮಾನವ-ಆನೆ ಸಂಘರ್ಷವನ್ನು ಕಡಿಮೆ ಮಾಡುವ ಜೊತೆಗೆ ಸಾರ್ವಜನಿಕರ ಸುರಕ್ಷತೆಗೆ ಮತ್ತಷ್ಟು ನೆರವಾಗಲಿದೆ.
