
ಬೇಲೂರು: ವಿಶ್ವಪ್ರಸಿದ್ಧ ಇತಿಹಾಸ ಪ್ರಸಿದ್ಧ ಬೇಲೂರು ಶ್ರೀ ಚನ್ನಕೇಶವ ಸ್ವಾಮಿ ದೇವಾಲಯದ ಆವರಣದಲ್ಲಿ ಭಾರಿ ಅಪರಾಧ ಕೃತ್ಯವೊಂದು ಬೆಳಕಿಗೆ ಬಂದಿದೆ. ದೇವಾಲಯದ ಹುಂಡಿ ಹಣ ಎಣಿಕೆ ಕಾರ್ಯಕ್ರಮದ ಸಂದರ್ಭದಲ್ಲಿ ನುಸುಳಿ, ಲಕ್ಷಾಂತರ ರೂಪಾಯಿ ಕಳ್ಳತನ ಮಾಡಲು ಯತ್ನಿಸಿದ ವ್ಯಕ್ತಿಯೊಬ್ಬ ಸಿಬ್ಬಂದಿಯ ಸಮಯಪ್ರಜ್ಞೆಯಿಂದಾಗಿ ಸಿಕ್ಕಿಬಿದ್ದಿದ್ದಾನೆ.ಘಟನೆಯ ವಿವರ:ದಿನಾಂಕ 12 ಜುಲೈ 2026ರಂದು ದೇವಾಲಯದಲ್ಲಿ ಅಧಿಕೃತವಾಗಿ ಹುಂಡಿ ಎಣಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ವಿಡಿಯೋ ಚಿತ್ರೀಕರಣ (ವಿಡಿಯೋಗ್ರಫಿ) ಮಾಡುವ ನೆಪದಲ್ಲಿ ನೀಲಕಂಠ ಎಂಬ ವ್ಯಕ್ತಿ ದೇವಾಲಯದ ಒಳಗೆ ಪ್ರವೇಶಿಸಿದ್ದಾನೆ.ದೃಶ್ಯಗಳನ್ನು ಸೆರೆಹಿಡಿಯುವ ನಾಟಕವಾಡುತ್ತಾ, ಯಾರಿಗೂ ತಿಳಿಯದಂತೆ ಹಣ ಎಣಿಸುವ ನೆಪದಲ್ಲಿ ಹುಂಡಿಯಲ್ಲಿದ್ದ ಭಾರಿ ಮೊತ್ತದ ನಗದನ್ನು ತನ್ನ ವಶಕ್ಕೆ ಪಡೆದುಕೊಳ್ಳಲು ಆರಂಭಿಸಿದ್ದಾನೆ. ಹಂತ ಹಂತವಾಗಿ ಈತ ಬರೋಬ್ಬರಿ 1 ಲಕ್ಷ 98,000 ರೂಪಾಯಿಗಳನ್ನು ಕಳ್ಳತನ ಮಾಡಿದ್ದ ಎನ್ನಲಾಗಿದೆ.ಸಿಬ್ಬಂದಿ ಸಮಯಪ್ರಜ್ಞೆ – ಆರೋಪಿ ವಶಕ್ಕೆ:ನೀಲಕಂಠನ ಈ ಕ*ಳ್ಳತನದ ಹಸ್ತಚಾಲಾಕಿತನವನ್ನು ಅಲ್ಲೇ ಕರ್ತವ್ಯದಲ್ಲಿದ್ದ ದೇವಾಲಯದ ಸಿಬ್ಬಂದಿಯೊಬ್ಬರು ಸೂಕ್ಷ್ಮವಾಗಿ ಗಮನಿಸಿ, ತಕ್ಷಣವೇ ಪತ್ತೆ ಹಚ್ಚಿದ್ದಾರೆ. ವಿಡಿಯೋಗ್ರಾಫರ್‌ನ ಕ*ಳ್ಳತನದ ಜಾಲ ಬಯಲಾಗುತ್ತಿದ್ದಂತೆ, ಸಿಬ್ಬಂದಿಯು ತಕ್ಷಣವೇ ದೇವಾಲಯದ ಉನ್ನತಾಧಿಕಾರಿಗಳಿಗೆ ಸಂಪೂರ್ಣ ಮಾಹಿತಿಯನ್ನು ಮುಟ್ಟಿಸಿದ್ದಾರೆ.ದೇವಾಲಯದ ಅಧಿಕಾರಿಗಳು ತಕ್ಷಣವೇ ಕಾರ್ಯಪ್ರವೃತ್ತರಾಗಿ ತಹಶೀಲ್ದಾರ್ ಅವರಿಗೆ ವಿಷಯ ಮುಟ್ಟಿಸಿದ್ದು, ಇದೀಗ ತಹಶೀಲ್ದಾರ್ ಮುಖಾಂತರ ಆರೋಪಿ ನೀಲಕಂಠನನ್ನು ಸ್ಥಳೀಯ ಪೊಲೀಸ್ ಠಾಣೆಗೆ ಒಪ್ಪಿಸಲಾಗಿದೆ. ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು, ಹಣವನ್ನು ಜಪ್ತಿ ಮಾಡಿಕೊಂಡಿದ್ದು, ಮುಂದಿನ ಕಾನೂನು ಕ್ರಮ ಹಾಗೂ ತನಿಖೆಯನ್ನು ಕೈಗೊಂಡಿದ್ದಾರೆ. ಭದ್ರತಾ ವಲಯದಲ್ಲೇ ನಡೆದ ಈ ಘಟನೆ ಸ್ಥಳೀಯವಾಗಿ ಭಾರಿ ಸಂಚಲನ ಮೂಡಿಸಿದೆ.
