ಜೆಎಸ್ಎಸ್ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ‘ನವಯಾನ’ ಸಾಂಸ್ಕೃತಿಕ ಹಾಗೂ ಕ್ರೀಡಾ ಚಳುವಳಿಗಳ ಉದ್ಘಾಟನೆ – ಸಾಧಕ ವಿದ್ಯಾರ್ಥಿನಿಯರಿಗೆ ಸನ್ಮಾನ

ಜೆಎಸ್ಎಸ್ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ‘ನವಯಾನ’ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಉದ್ಘಾಟನೆ – ಸಾಧಕ ವಿದ್ಯಾರ್ಥಿನಿಯರಿಗೆ ಸನ್ಮಾನ

ಸಕಲೇಶಪುರ :ಪಟ್ಟಣದ ಜೆಎಸ್ಎಸ್ ಸ್ವತಂತ್ರ ಪದವಿ ಪೂರ್ವ ಕಾಲೇಜು ಕೌಡಳ್ಳಿ, ಹಾಗೂ ಎಎ ಅಕಾಡೆಮಿ, ದಾವಣಗೆರೆ ಸಹಯೋಗದಲ್ಲಿ ‘ನವಯಾನ’ ಹೆಸರಿನ 2026–27ನೇ ಸಾಲಿನ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಗುರುವಾರ ಕಾಲೇಜಿನ ಸಭಾಂಗಣದಲ್ಲಿ ವಿಜೃಂಭಣೆಯಿಂದ ನಡೆಯಿತು.ಕಾರ್ಯಕ್ರಮವನ್ನು ನವ್ಕಿಸ್ ಇಂಜಿನಿಯರಿಂಗ್ ಕಾಲೇಜು, ಹಾಸನದ ಪ್ರಾಂಶುಪಾಲರಾದ ಡಾ. ಸಂಜಯ್ ಪಾಂಡೆ ಎಂ.ಬಿ. ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿ ಜೀವನದಲ್ಲಿ ಶಿಸ್ತು, ಸಮಯಪ್ರಜ್ಞೆ ಹಾಗೂ ನಿರಂತರ ಪರಿಶ್ರಮದ ಮಹತ್ವವನ್ನು ಒತ್ತಿ ಹೇಳಿದರು. ಪ್ರತಿಯೊಬ್ಬ ವಿದ್ಯಾರ್ಥಿಯ ಯಶಸ್ಸಿನ ಹಿಂದೆ ತಂದೆ-ತಾಯಿಯ ಅಪಾರ ತ್ಯಾಗ, ಪ್ರೀತಿ ಮತ್ತು ನಿರೀಕ್ಷೆಗಳಿರುತ್ತವೆ. ಆದ್ದರಿಂದ ವಿದ್ಯಾರ್ಥಿಗಳು ತಮ್ಮ ಪೋಷಕರ ಕನಸುಗಳಿಗೆ ಗೌರವ ನೀಡಿ, ತಮ್ಮಲ್ಲಿರುವ ಸಾಮರ್ಥ್ಯವನ್ನು ಅರಿತು ಆತ್ಮವಿಶ್ವಾಸದಿಂದ ಗುರಿಯತ್ತ ಸಾಗಬೇಕು. ಶಿಕ್ಷಣವೆಂದರೆ ಕೇವಲ ಉತ್ತಮ ಅಂಕ ಗಳಿಸುವುದಲ್ಲ, ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವ ಸಾಧನವಾಗಿದ್ದು, ಪ್ರಾಮಾಣಿಕತೆ, ಜವಾಬ್ದಾರಿ ಹಾಗೂ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ನಿಜವಾದ ಯಶಸ್ಸು ಸಾಧ್ಯ ಎಂದು ಹೇಳಿದರು.ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳಿಗೆ ಚಾಲನೆ ನೀಡಿದ ನವ್ಕಿಸ್ ಇಂಜಿನಿಯರಿಂಗ್ ಕಾಲೇಜಿನ ಕ್ಯಾಂಪಸ್ ಆಡಳಿತಾಧಿಕಾರಿ ಕ್ಯಾಪ್ಟನ್ ಜಿ.ಬಿ. ವರದರಾಜು ಅವರು ಮಾತನಾಡಿ ವಿಜ್ಞಾನ ವಿಭಾಗವನ್ನು ಆಯ್ಕೆ ಮಾಡಿಕೊಂಡಿರುವ ವಿದ್ಯಾರ್ಥಿಗಳಿಗೆ ಉಜ್ವಲ ಭವಿಷ್ಯದ ಅನೇಕ ಅವಕಾಶಗಳು ತೆರೆದಿವೆ ಎಂದು ಹೇಳಿದರು. ಪಿಯುಸಿ ಶಿಕ್ಷಣವು ಜೀವನದ ಮಹತ್ವದ ತಿರುವಾಗಿದ್ದು, ಇದೇ ಹಂತದಲ್ಲಿ ವೈದ್ಯಕೀಯ, ಇಂಜಿನಿಯರಿಂಗ್, ಸಂಶೋಧನೆ, ಮೂಲ ವಿಜ್ಞಾನ ಹಾಗೂ ಇತರ ವೃತ್ತಿಪರ ಕ್ಷೇತ್ರಗಳ ಕುರಿತು ಸ್ಪಷ್ಟ ಗುರಿಯನ್ನು ರೂಪಿಸಿಕೊಳ್ಳಬೇಕು. ವಿದ್ಯಾರ್ಥಿಗಳು ತಮ್ಮ ಕನಸುಗಳಿಗೆ ರೆಕ್ಕೆ ಕಟ್ಟಿಕೊಂಡು ಆತ್ಮವಿಶ್ವಾಸ, ಶಿಸ್ತು ಮತ್ತು ಪರಿಶ್ರಮದೊಂದಿಗೆ ಮುನ್ನಡೆದರೆ ಯಾವುದೇ ಗುರಿಯೂ ಅಸಾಧ್ಯವಲ್ಲ. ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿದ್ದು, ಆತ್ಮವಿಶ್ವಾಸ, ನಾಯಕತ್ವ ಮತ್ತು ತಂಡದ ಮನೋಭಾವವನ್ನು ಬೆಳೆಸುತ್ತವೆ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಜೆಎಸ್ಎಸ್ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ನಂಜುಂಡಪ್ಪ ಎಸ್., ಸಮನ್ವಯಾಧಿಕಾರಿ ಶ್ರೀ ಮಂಜುನಾಥ್ ಆರ್. ಹಾಗೂ ಜೆಎಸ್ಎಸ್ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಶ್ರೀ ನಂಜುಂಡಸ್ವಾಮಿ ಎಸ್. ಉಪಸ್ಥಿತರಿದ್ದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.ಈ ಸಂದರ್ಭದಲ್ಲಿ 2025–26ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ 43 ವಿದ್ಯಾರ್ಥಿನಿಯರನ್ನು ಸನ್ಮಾನಿಸಿ ಗೌರವಿಸಲಾಯಿತು. ವಿದ್ಯಾರ್ಥಿನಿಯರ ಶೈಕ್ಷಣಿಕ ಸಾಧನೆಯನ್ನು ಶ್ಲಾಘಿಸಿದ ಗಣ್ಯರು, ಇದೇ ಉತ್ಸಾಹ ಮತ್ತು ಪರಿಶ್ರಮದಿಂದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿಯೂ ಉತ್ತಮ ಸಾಧನೆ ಮಾಡುವಂತೆ ಪ್ರೋತ್ಸಾಹಿಸಿದರು.ನಂತರ ಪ್ರಥಮ ಪಿಯುಸಿ ವಿದ್ಯಾರ್ಥಿನಿಯರನ್ನು ಆತ್ಮೀಯವಾಗಿ ಸ್ವಾಗತಿಸಿ, ‘ನವಯಾನ’ ಕಾರ್ಯಕ್ರಮದ ಅಂಗವಾಗಿ ಜ್ಞಾನ ದೀಪ ಹಿಡಿದು ಶಿಸ್ತು, ಪ್ರಾಮಾಣಿಕತೆ, ಅಧ್ಯಯನ ಹಾಗೂ ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಪ್ರತಿಜ್ಞೆ ಬೋಧಿಸಲಾಯಿತು.ಇದೇ ಸಂದರ್ಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಪ್ರತಿಭೆ ಅನಾವರಣಕ್ಕೆ ವೇದಿಕೆಯಾಗಿದ್ದು, ಹೊಸ ವಿದ್ಯಾರ್ಥಿನಿಯರಲ್ಲಿ ಆತ್ಮವಿಶ್ವಾಸ, ನಾಯಕತ್ವ ಮತ್ತು ತಂಡದ ಮನೋಭಾವ ಬೆಳೆಸುವ ಉದ್ದೇಶದಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆಎಸ್ಎಸ್ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಶಿವಕುಮಾರ್ ಆರ್.ಎಂ. ವಹಿಸಿದ್ದರು.ಎಎ ಅಕಾಡೆಮಿ, ದಾವಣಗೆರೆಯ ನಿರ್ದೇಶಕರಾದ ಶ್ರೀ ಅಣ್ಣೇಶ್ ಕೆ.ಎಚ್. ಹಾಗೂ ಕಾರ್ಯದರ್ಶಿ ಶ್ರೀ ಅನಿಲ್ ಕುಮಾರ್ ವಿಶೇಷ ಅತಿಥಿಗಳಾಗಿ ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರು, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿನಿಯರು ಹಾಗೂ ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಸಾಕ್ಷಿಯಾದರು.

Leave a Reply

Your email address will not be published. Required fields are marked *

error: Content is protected !!