ಶಿರಾಡಿಘಾಟ್‌ನಲ್ಲಿ ಭೂಕುಸಿತ ಭೀತಿ: ಅಪಾಯದ ಸ್ಥಳಗಳನ್ನು ಪರಿಶೀಲನೆ ನಡೆಸಿದ ಎಸ್ಪಿ ಶುಭಾನ್ವಿತ

ಸಕಲೇಶಪುರ : ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಶಿರಾಡಿ ಘಾಟ್‌ನ ಹಲವು ಪ್ರದೇಶಗಳಲ್ಲಿ ಭೂಕುಸಿತದ ಭೀತಿ ಎದುರಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಶುಭಾನ್ವಿತ ಅವರು ಭೂಕುಸಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿದ ಅವರು, ಹಿಂದೆ ಶಿರಾಡಿ ಘಾಟ್‌ನಲ್ಲಿ ಒಟ್ಟು 17 ಸ್ಥಳಗಳಲ್ಲಿ ಪದೇ ಪದೇ ಭೂಕುಸಿತ ಸಂಭವಿಸುತ್ತಿತ್ತು. ರಸ್ತೆ ಕಾಮಗಾರಿ ಪೂರ್ಣಗೊಂಡ ನಂತರ ಆ ಸಂಖ್ಯೆ ಐದಕ್ಕೆ ಇಳಿದಿದೆ ಎಂದು ತಿಳಿಸಿದರು.ಯಾವುದೇ ಅವಘಡ ಸಂಭವಿಸಿದರೂ ತಕ್ಷಣ ಕ್ರಮ ಕೈಗೊಳ್ಳಲು ಪೊಲೀಸ್ ಹಾಗೂ ಹೆದ್ದಾರಿ ಪ್ರಾಧಿಕಾರದ ತಂಡಗಳು ಸಜ್ಜಾಗಿವೆ. ನಾಲ್ಕು ಜೆಸಿಬಿ ಯಂತ್ರಗಳು, ಎರಡು ಹಿಟಾಚಿ ಯಂತ್ರಗಳು, ಸಿಬ್ಬಂದಿಯ ಸಂಚಾರಕ್ಕೆ ಅಗತ್ಯ ವಾಹನಗಳು ಹಾಗೂ 24 ಗಂಟೆಯೂ ಆಂಬುಲೆನ್ಸ್ ಸಿದ್ಧ ಸ್ಥಿತಿಯಲ್ಲಿ ಇರಿಸಲಾಗಿದ್ದು, ಸಕಲೇಶಪುರ ಡಿವೈಎಸ್‌ಪಿ ನೇತೃತ್ವದಲ್ಲಿ ವಿಶೇಷ ತಂಡ ಕಾರ್ಯಾಚರಣೆಗೆ ಸಜ್ಜಾಗಿದೆ ಎಂದು ಅವರು ಹೇಳಿದರು.ಕಪ್ಪಳ್ಳಿ, ದೊಡ್ಡತಪ್ಲು, ಹೆಗ್ಗದ್ದೆ ಸೇರಿದಂತೆ ಹಲವು ಅಪಾಯದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಎಸ್‌ಪಿ ಶುಭಾನ್ವಿತ, ಅಪಾಯದ ಸ್ಥಳಗಳಲ್ಲಿ ಸಂಚರಿಸುವ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಹಾಗೂ ಪೊಲೀಸ್ ಇಲಾಖೆ ನೀಡುವ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಹೇಳಿದರು .

Leave a Reply

Your email address will not be published. Required fields are marked *

error: Content is protected !!