
ಸಕಲೇಶಪುರ: ತಾಲೂಕಿನಲ್ಲಿ ತೆರೆಮರೆಯಲ್ಲಿ ನಡೆಯುತ್ತಿದ್ದ ಅಕ್ರಮ ಮಾದಕ ದಂಧೆಯ ವಿರುದ್ಧ ಸಕಲೇಶಪುರ ನಗರ ಠಾಣೆಯ ಅಪರಾಧ ವಿಭಾಗದ ಪಿಎಸ್ಐ ಕೃಷ್ಣಪ್ಪ ನೇತೃತ್ವದ ತಂಡ ದಾಳಿ ನಡೆಸಿ ಭರ್ಜರಿ ಯಶಸ್ಸು ಸಾಧಿಸಿದೆ. ಪೊಲೀಸ್ ಇನ್ಸ್ಪೆಕ್ಟರ್ ವನರಾಜು ವಿ.ಸಿ. ಅವರ ಮಾರ್ಗದರ್ಶನದಲ್ಲಿ ಕಾರ್ಯಪ್ರವೃತ್ತರಾದ ಪಿಎಸ್‌ಐ ಕೃಷ್ಣಪ್ಪ ಅವರ ತಂಡವು, ಭಾರಿ ಪ್ರಮಾಣದ ಗಾಂಜಾ ನೆಟ್‌ವರ್ಕ್ ಅನ್ನು ಸದೆಬಡಿಯುವಲ್ಲಿ ಯಶಸ್ವಿಯಾಗಿದೆ.ಮೈನುಲ್ ಹಕ್ ಬಿನ್ ಮನ್ನಾಸ್ ಆಲಿ ಎಂಬ ಅಸ್ಸಾಂ ಮೂಲದ ಕೂಲಿ ಕಾರ್ಮಿಕನನ್ನು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಗಾಂಜಾ ಮಾರಾಟದ ದಂಧೆಯಲ್ಲಿ ತೊಡಗಿದ್ದಾಗ ಪಿಎಸ್‌ಐ ಕೃಷ್ಣಪ್ಪ ನೇತೃತ್ವದ ಖಾಕಿ ಪಡೆ ಚಾಣಾಕ್ಷ ತಂತ್ರ ರೂಪಿಸಿ, ಜಾಲಕ್ಕೆ ಕೆಡವಿ ಸ್ಥಳದಲ್ಲೇ ವಶಕ್ಕೆ ಪಡೆದಿದೆ.ಬಂಧಿತ ಖದೀಮನಿಂದ ಬರೋಬ್ಬರಿ 2 ಕೆಜಿ 400 ಗ್ರಾಂ ತೂಕದ ಅಕ್ರಮ ಗಾಂಜಾವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಆರೋಪಿಯ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿ ಗಂಭೀರ ಪ್ರಕರಣ ದಾಖಲಿಸಿಕೊಂಡು, ನ್ಯಾಯಾಲಯದ ಆದೇಶದ ಮೇರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.ಈ ಕಾರ್ಯಾಚರಣೆಯಲ್ಲಿ ಪೊಲೀಸ್ ಸಿಬ್ಬಂದಿಗಳಾದ ಪಿಸಿ ರೇವಣ್ಣ, ಶ್ರೀಧರ್, ಅಶೋಕ್, ಮಧು ಹಾಗೂ ಹೆಚ್.ಸಿ ಸುನಿಲ್ ಇದ್ದರು.
