

ಸಕಲೇಶಪುರ: ಸರ್ಕಾರಿ ಶಾಲೆಗಳಲ್ಲಿ ಓದಿದವರು ಜೀವನವನ್ನು ಹೇಗೆ ಬೇಕಾದರು ಎದುರಿಸುವರು ಎಂದು ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲ ರಮೇಶ್ ಅಡಿಗ ಹೇಳಿದರು. ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ಆಯೋಜಿಸಲಾಗಿದ್ದ ಕಾಲೇಜಿನಲ್ಲಿ ಓದಿದ 2002ನೇ ಸಾಲಿನ ಎಸ್.ಎಸ್.ಎಲ್.ಸಿ ಬ್ಯಾಚ್ ಗೆಳೆಯರ ಬಳಗದ ವತಿಯಿಂದ ಆಯೋಜಿಸಲಾಗಿದ್ದ ವಾರ್ಷಿಕ ಸ್ನೇಹ ಸ್ಮಮೀಲನ ಮತ್ತು ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಹಲವು ವರ್ಷಗಳ ನಂತರ ಇಲ್ಲಿ ಆಗಮಿಸಿ ಇಂತಹ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕೆ ಅತ್ಯಂತ ಸಂತೋಷವಾಗುತ್ತಿದೆ. ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ವಿದ್ಯಾಬ್ಯಾಸ ಮಾಡಿದ ವಿದ್ಯಾರ್ಥಿಗಳು ಜೀವನದಲ್ಲಿ ಎಂತಹ ಸಮಸ್ಯೆಯನ್ನು ಸಹ ಹೆದರದೆ ಎದುರಿಸುತ್ತಾರೆ. ಇದಕ್ಕೆ ಸಾಕ್ಷಿ ಏನೆಂದರೆ ಬಡತನದಲ್ಲಿ ವಿದ್ಯಾಬ್ಯಾಸ ಮಾಡಿದರು ಸಹ ಇಲ್ಲಿ ಓದಿರುವ ಅನೇಕ ವಿದ್ಯಾರ್ಥಿಗಳು ಸಮಾಜದ ವಿವಿಧ ರಂಗಗಳಲ್ಲಿ ಬದುಕನ್ನು ರೂಪಿಸಿಕೊಂಡಿದ್ದಾರೆ. ಅನೇಕ ವಿದ್ಯಾರ್ಥಿಗಳು ಸರ್ಕಾರಿ ಅಧಿಕಾರಿಗಳಾಗಿದ್ದಾರೆ, ಇನ್ನು ಹಲವಾರು ಮಂದಿ ಖಾಸಗಿ ವಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ನು ಹಲವಾರು ಮಂದಿ ಸ್ವಯಂ ಉದ್ಯೋಗ ಮಾಡುತ್ತಿದ್ದಾರೆ. ಸ್ನೇಹ ದಿನದ ಈ ಸಂಧರ್ಭದಲ್ಲಿ ಇಲ್ಲಿ ಕಾರ್ಯನಿರ್ವಹಿಸಿದ ಹಲವು ನನ್ನ ಸಹದ್ಯೋಗಿಗಳು ಸಹ ಆಗಮಿಸಿರುವುದು ಸಂತೋಷದ ವಿಷಯವಾಗಿದೆ. ಇಂತಹ ಒಂದು ಕಾರ್ಯಕ್ರಮವನ್ನು ಆಯೋಜಿಸಿದ 2002ನೇ ಸಾಲಿನ ಗೆಳೆಯರ ಬಳಗಕ್ಕೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದರು. ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪಪ್ರಾಂಶುಪಾಲೆ ವೆಂಕಟಮ್ಮ ಮಾತನಾಡಿ ಇಲ್ಲಿ ಸಾವಿರಾರು ವಿದ್ಯಾರ್ಥಿಗಳು ಇಲ್ಲಿ ಓದಿ ಬದುಕನ್ನು ರೂಪಿಸಿಕೊಂಡಿದ್ದಾರೆ. ಆದರೆ ನಮ್ಮ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಇಂತಹ ಒಂದು ಕಾರ್ಯಕ್ರಮವನ್ನು 2002 ಗೆಳೆಯರ ಬಳಗ ಮಾತ್ರ ಮಾಡಿದ್ದು ಅವರಿಗೆ ನಾವು ನಮ್ಮ ಕಾಲೇಜಿನ ವತಿಯಿಂದ ಹೃದಯಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು. ಕಾರ್ಯಕ್ರಮವನ್ನು ಅತ್ಯಂತ ಅರ್ಥಪೂರ್ಣವಾಗಿ ಆಯೋಜಿಸಲಾಗಿತ್ತು. 2002ನೇ ಸಾಲಿನ ಹಲವಾರು ವಿದ್ಯಾರ್ಥಿಗಳು ಕಾಲೇಜಿನ ಉಪನ್ಯಾಸಕರು ಹಾಗೂ ಅಂದಿನ ದಿನಗಳ ಕುರಿತು ಅನಿಸಿಕೆಗಳನ್ನು ಹಂಚಿಕೊಂಡರು. ಕಾರ್ಯಕ್ರಮದ ಅಂಗವಾಗಿ ಗುರುವಂದನಾ ಕಾರ್ಯಕ್ರಮ ನಡೆಯಿತು. ಹಾಜರಿದ್ದ ವಿದ್ಯಾರ್ಥಿಗಳು ಹಳೆಯ ನೆನಪುಗಳೊಂದಿಗೆ ಸಂಭ್ರಮಿಸಿದರು .ಸಂಗೀತ ಹಾಗೂ ನೃತ್ಯ ಕಾರ್ಯಕ್ರಮ ಸಹ ನಡೆಯಿತು. ವೇದಿಕೆಯಲ್ಲಿ ಕಾಲೇಜಿನ ನಿವೃತ್ತ ಪ್ರಾಂಶುಪಾಲರು ಹಾಗೂ ನಿವೃತ್ತ ಶಿಕ್ಷಕರಾದ ವಾಣಿ ಘಟ್ಟಿ,ಜ್ಯೋತಿ,ಕೃಷ್ಣಮೂರ್ತಿ, ಧನಂಜಯ, ಸೇರಿದಂತೆ ಇತರರು ಹಾಜರಿದ್ದರು.
