ಬೈಕೆರೆ ಗ್ರಾಮದಲ್ಲಿ 300 ಹಣ್ಣಿನ ಗಿಡಗಳ ನೆಡುವ ಮೂಲಕ ಪ್ರಾಣಿ ಪಕ್ಷಿಗಳ ಆಹಾರ ಸಂರಕ್ಷಣೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಶೌರ್ಯ ತಂಡದ ವಿಶೇಷ ಅಭಿಯಾನ

ಸಕಲೇಶಪುರ, ಆ. 3: ಕಾಡು ಪ್ರಾಣಿಗಳು ಹಾಗೂ ಪಕ್ಷಿಗಳು ಆಹಾರ ಅರಸಿ ಕಾಡಿನಿಂದ ಗ್ರಾಮಗಳಿಗೆ ಬರುತ್ತಿರುವುದರಿಂದ ಮಾನವ–ವನ್ಯಜೀವಿ ಸಂಘರ್ಷ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಹಾಗೂ ವನ್ಯಜೀವಿಗಳಿಗೆ ಕಾಡಿನಲ್ಲೇ ಆಹಾರ ಲಭ್ಯವಾಗುವಂತೆ ಮಾಡುವ ಉದ್ದೇಶದಿಂದ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ದೂರದೃಷ್ಟಿಯ ಚಿಂತನೆಯಂತೆ ಬೈಕೆರೆ ಗ್ರಾಮದ ಅರಣ್ಯ ಪ್ರದೇಶದಲ್ಲಿ 300 ವಿವಿಧ ಜಾತಿಯ ಹಣ್ಣಿನ ಗಿಡಗಳ ನಾಟಿ ಕಾರ್ಯಕ್ರಮವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಶೌರ್ಯ ವಿಪತ್ತು ನಿರ್ವಹಣಾ ತಂಡದ ವತಿಯಿಂದ ಹಮ್ಮಿಕೊಳ್ಳಲಾಯಿತು.ಕಾಡಿನಲ್ಲಿ ಹಣ್ಣಿನ ಗಿಡಗಳ ಸಂಖ್ಯೆ ಹೆಚ್ಚಾದರೆ ಪ್ರಾಣಿ ಹಾಗೂ ಪಕ್ಷಿಗಳಿಗೆ ವರ್ಷಪೂರ್ತಿ ನೈಸರ್ಗಿಕ ಆಹಾರ ದೊರೆಯುತ್ತದೆ. ಇದರಿಂದ ಕಾಡು ಬಿಟ್ಟು ಗ್ರಾಮಗಳಿಗೆ ಆಹಾರ ಅರಸಿ ಬರುವ ಪ್ರಮಾಣ ಕಡಿಮೆಯಾಗಲಿದ್ದು, ಮಾನವ–ಪ್ರಾಣಿ ಸಂಘರ್ಷವನ್ನು ತಗ್ಗಿಸುವಲ್ಲಿ ಈ ಯೋಜನೆ ಪರಿಣಾಮಕಾರಿ ಹೆಜ್ಜೆಯಾಗಲಿದೆ. ಪರಿಸರ ಸಂರಕ್ಷಣೆ, ಜೀವ ವೈವಿಧ್ಯದ ಉಳಿವು ಹಾಗೂ ವನ್ಯಜೀವಿಗಳ ರಕ್ಷಣೆಯ ದೃಷ್ಟಿಯಿಂದ ಈ ಅಭಿಯಾನ ಮಹತ್ವದ್ದಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ರಾಜೇಶ.ಎಂ ತಿಳಿಸಿದರು.ಈ ಸಂದರ್ಭದಲ್ಲಿ ಬೈಕೆರೆ ಗ್ರಾಮದ ಪ್ರದೀಪ್ ಡಿಸೋಜ ಮಾತನಾಡಿ, “ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ತಂಡವು ಪರಿಸರ ಸಂರಕ್ಷಣೆ, ವಿಪತ್ತು ನಿರ್ವಹಣೆ ಹಾಗೂ ಸಮಾಜಮುಖಿ ಸೇವಾ ಕಾರ್ಯಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದೆ. ಗ್ರಾಮ ಹಾಗೂ ಪರಿಸರದ ಹಿತದೃಷ್ಟಿಯಿಂದ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವ ತಂಡದ ಕಾರ್ಯ ನಿಜಕ್ಕೂ ಶ್ಲಾಘನೀಯ. ಮುಂದಿನ ದಿನಗಳಲ್ಲಿಯೂ ಇಂತಹ ಪರಿಸರ ಸ್ನೇಹಿ ಅಭಿಯಾನಗಳು ಇನ್ನಷ್ಟು ವಿಸ್ತಾರವಾಗಲಿ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕ ಚಿರಂತ್, ಶೌರ್ಯ ವಿಪತ್ತು ನಿರ್ವಹಣಾ ಘಟಕದ ಮಾಸ್ಟರ್ ಶಿವಣ್ಣ, ನಿಕಟ ಪೂರ್ವ ಮಾಸ್ಟರ್ ಮಧುವರನ್, ಸಕಲೇಶಪುರ ಘಟಕ ಪ್ರತಿನಿಧಿ ಹರೀಶ್, ಘಟಕದ ಸಂಯೋಜಕರಾದ ದಿವ್ಯ ಹಾಗೂ ಸರೋಜ, ಸ್ವಯಂಸೇವಕರಾದ ವಸಂತ್ ಕುಮಾರ್, ಉಮೇಶ್, ಗುರುಪ್ರಕಾಶ್, ಷಣ್ಮುಖ, ರಾಮು, ಬಾಸ್ಕರ್, ರಮೇಶ್, ಮಂಜುನಾಥ್, ಆನಂದ್, ಲೀಲಾವತಿ ಮತ್ತು ಅನಿಲ್ ಸೇರಿದಂತೆ ಹಲವರು ಭಾಗವಹಿಸಿ ಗಿಡ ನೆಡುವ ಕಾರ್ಯವನ್ನು ಯಶಸ್ವಿಯಾಗಿ ನೆರವೇರಿಸಿದರು.

ಪರಿಸರ ಸಂರಕ್ಷಣೆ ಮತ್ತು ವನ್ಯಜೀವಿಗಳ ಉಳಿವಿಗೆ ಪೂರಕವಾದ ಈ ಕಾರ್ಯಕ್ರಮವು ಸಾರ್ವಜನಿಕರಿಂದ ವ್ಯಾಪಕ ಪ್ರಶಂಸೆಗೆ ಪಾತ್ರವಾಯಿತು.

Leave a Reply

Your email address will not be published. Required fields are marked *

error: Content is protected !!