
ಸಕಲೇಶಪುರ:ಪಶ್ಚಿಮ ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಸುಬ್ರಹ್ಮಣ್ಯ ರೋಡ್ ಮತ್ತು ಸಕಲೇಶಪುರ ರೈಲು ನಿಲ್ದಾಣಗಳ ನಡುವಿನ ಯಡಕುಮರಿ–ಸಿರಿಬಾಗಿಲು ಭಾಗದಲ್ಲಿ ರೈಲು ಹಳಿಯ ಮೇಲೆ ಭಾರಿ ಪ್ರಮಾಣದ ಮಣ್ಣು ಕುಸಿದುಬಿದ್ದ ಪರಿಣಾಮ ಸ್ಥಗಿತಗೊಂಡಿದ್ದ ರೈಲು ಸಂಚಾರವು ಇದೀಗ ಯಶಸ್ವಿಯಾಗಿ പുನರಾರಂಭಗೊಂಡಿದೆ.ಸೋಮವಾರ ಸಕಲೇಶಪುರ-ಸುಬ್ರಹ್ಮಣ್ಯ ರೋಡ್ ನಡುವೆ ಗುಡ್ಡ ಕುಸಿದ ಕಾರಣ ಈ ಮಾರ್ಗದಲ್ಲಿ ರೈಲು ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಘಟನೆ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ರೈಲ್ವೆ ಸಿಬ್ಬಂದಿ ಹಾಗೂ ತಾಂತ್ರಿಕ ತಂಡವು ನಿರಂತರವಾಗಿ ಕಾರ್ಯಾಚರಣೆ ನಡೆಸಿ, ಹಳಿಯ ಮೇಲಿದ್ದ ಮಣ್ಣು ಮತ್ತು ಕಲ್ಲುಗಳನ್ನು ಯಶಸ್ವಿಯಾಗಿ ತೆರವುಗೊಳಿಸಿದ್ದಾರೆ.ತೆರವು ಕಾರ್ಯ ಪೂರ್ಣಗೊಂಡ ಬಳಿಕ ಪಶ್ಚಿಮ ಘಟ್ಟದ ಈ ಹಳಿಯಲ್ಲಿ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಲಾಯಿತು. ಮಣ್ಣು ತೆರವುಗೊಳಿಸಿದ ನಂತರ ಮಂಗಳೂರು ಸೆಂಟ್ರಲ್ – ವಿಜಯಪುರ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ: 17378) ರೈಲು ಪಶ್ಚಿಮ ಘಟ್ಟದ ಸುಂದರ ಹಾಗೂ ಕಡಿದಾದ ಹಳಿಯ ಮೇಲೆ ಸುರಕ್ಷಿತವಾಗಿ ಸಂಚರಿಸಿತು. ಇದರಿಂದಾಗಿ ಪ್ರಯಾಣಿಕರು ನಿಟ್ಟುಸಿರು ಬಿಡುವಂತಾಗಿದೆ.
