ಶ್ರೀ ಸಕಲೇಶ್ವರ ಸ್ವಾಮಿ ಜಾತ್ರೆಗೆ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಅಧಿಕೃತ ಆಹ್ವಾನ

ಸಕಲೇಶಪುರದ ಐತಿಹಾಸಿಕ ಪ್ರಸಿದ್ಧ ಶ್ರೀ ಸಕಲೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಹಾಗೂ ಬ್ರಹ್ಮರಥೋತ್ಸವಕ್ಕೆ ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದ ಸಂಸದರಾದ ಶ್ರೀ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಅಧಿಕೃತವಾಗಿ ಆಹ್ವಾನ ನೀಡಲಾಯಿತು.
ಸಕಲೇಶಪುರ–ಆಲೂರು–ಕಟ್ಟಾಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಸಿಮೆಂಟ್ ಮಂಜು ಅವರು ಇಂದು ಕೊಡಗಿನ ಖಾಸಗಿ ಹೋಟೆಲ್‌ನಲ್ಲಿ ಸಂಸದರನ್ನು ಭೇಟಿ ಮಾಡಿ, ಮೈಸೂರು ರಾಜವಂಶಸ್ಥರಿಗೆ ಸಲ್ಲುವ ಸಾಂಪ್ರದಾಯಿಕ ವಿಧಿವಿಧಾನಗಳೊಂದಿಗೆ ಆಮಂತ್ರಣ ಪತ್ರಿಕೆಯನ್ನು ಹಸ್ತಾಂತರಿಸಿ, ಧಾರ್ಮಿಕ ಕಾರ್ಯಕ್ರಮಕ್ಕೆ ಆಗಮಿಸುವಂತೆ ವಿನಂತಿಸಿದರು.
ಫೆಬ್ರವರಿ 1 ಮತ್ತು 2 ರಂದು ಜರುಗಲಿರುವ ಜಾತ್ರಾ ಮಹೋತ್ಸವದ ಕುರಿತು ಮಾತನಾಡಿದ ಶಾಸಕ ಸಿಮೆಂಟ್ ಮಂಜು ಅವರು, “ಸಕಲೇಶಪುರದ ಶಕ್ತಿ ದೇವತೆಯಾದ ಶ್ರೀ ಸಕಲೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವವು ಪ್ರತಿವರ್ಷದಂತೆ ಈ ಬಾರಿಯೂ ಅತ್ಯಂತ ವಿಜೃಂಭಣೆಯಿಂದ ನಡೆಯಲಿದೆ. ಫೆಬ್ರವರಿ 1 ಮತ್ತು 2 ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಬ್ರಹ್ಮರಥೋತ್ಸವ ಜರುಗಲಿದ್ದು, ಈ ಶುಭ ಸಂದರ್ಭದಲ್ಲಿ ರಾಜವಂಶಸ್ಥರ ಆಗಮನವು ಭಕ್ತರಿಗೆ ಮತ್ತಷ್ಟು ಸೌಭಾಗ್ಯವನ್ನು ತರಲಿದೆ,” ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶ್ರೀ ಸಕಲೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಸಮಿತಿಯ ಎಲ್ಲಾ ಪದಾಧಿಕಾರಿಗಳು ಹಾಗೂ ಪ್ರಮುಖ ಸದಸ್ಯರು ಉಪಸ್ಥಿತರಿದ್ದು, ಸಂಸದರೊಂದಿಗೆ ಜಾತ್ರೆಯ ಸಿದ್ಧತೆಗಳ ಕುರಿತು ಚರ್ಚಿಸಿದರು.

Leave a Reply

Your email address will not be published. Required fields are marked *

error: Content is protected !!