ಸಕಲೇಶಪುರದಲ್ಲಿ ವಿಶ್ವ ಹಿಂದೂ ಪರಿಷದ್ – ಬಜರಂಗ ದಳದಿಂದ ಗೋ ಹತ್ಯೆ, ಮತಾಂತರ, ಲವ್ ಜಿಹಾದ್ ಖಂಡಿಸಿ ಬೃಹತ್ ಪ್ರತಿಭಟನೆ.

ಸಕಲೇಶಪುರ : ವಿಶ್ವ ಹಿಂದೂ ಪರಿಷದ್ ಹಾಗೂ ಬಜರಂಗದಳ, ಸಕಲೇಶಪುರ ತಾಲ್ಲೂಕು ಘಟಕದ ವತಿಯಿಂದ ಗೋ ಹತ್ಯೆ , ಮತಾಂತರ ,ಲವ್ ಜಿಹಾದ್ , ಅಕ್ರಮ ಬಂಗ್ಲಾ ವಲಸಿಗರ ವಿರುದ್ಧ ಗುರುವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.ಪಟ್ಟಣದ ಶ್ರೀ ಸಕಲೇಶ್ವರಸ್ವಾಮಿ ದೇವಸ್ಥಾನದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಎ.ಸಿ. ಕಚೇರಿವರೆಗೆ ಸಾಗಿತು. ಪ್ರತಿಭಟನಾಕಾರರು ಗೋ ಹತ್ಯೆ ತಡೆ, ಮಹಿಳೆಯರ ಸುರಕ್ಷತೆ, ಅಕ್ರಮ ಮತಾಂತರ ಹಾಗೂ ಅಕ್ರಮ ವಲಸಿಗರ ದಾಖಲೆ ಪರಿಶೀಲನೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಸರ್ಕಾರ ಹಾಗೂ ಆಡಳಿತದ ಗಮನ ಸೆಳೆಯುವ ಪ್ರಯತ್ನ ಮಾಡಿದರು.ಪ್ರತಿಭಟನೆಯಲ್ಲಿ ಮಾತನಾಡಿದ ಮುಖಂಡರು, ಸಕಲೇಶಪುರದಲ್ಲಿ ನಡೆಯುತ್ತಿದೆ ಎನ್ನಲಾದ ಅಕ್ರಮ ಗೋ ಸಾಗಾಟ ಮತ್ತು ಗೋ ಹತ್ಯೆ ಪ್ರಕರಣಗಳನ್ನು ತಡೆಗಟ್ಟಲು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಇತ್ತೀಚಿನ ಘಟನೆಗಳ ಹಿನ್ನೆಲೆಯಲ್ಲಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಿ, ಮುಂದಿನ ದಿನಗಳಲ್ಲಿ ಇಂತಹ ಪ್ರಕರಣಗಳು ಮರುಕಳಿಸದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು ಎಂದು ಆಗ್ರಹಿಸಿದರು.ಇದೇ ವೇಳೆ ಮಹಿಳೆಯರನ್ನು ಪ್ರೀತಿ ಹಾಗೂ ವಿವಾಹದ ಹೆಸರಿನಲ್ಲಿ ವಂಚಿಸುವುದು, ಕಿರುಕುಳ ನೀಡುವುದು ಅಥವಾ ಬಲವಂತದ ಧರ್ಮಾಂತರಕ್ಕೆ ಒತ್ತಾಯಿಸುವ ಪ್ರಕರಣಗಳ ಕುರಿತು ಸಮಗ್ರ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಯಿತು.ಅಲ್ಲದೆ, ಆಮಿಷ, ಒತ್ತಡ ಅಥವಾ ಬಲವಂತದ ಮೂಲಕ ನಡೆಯುವ ಯಾವುದೇ ಅಕ್ರಮ ಮತಾಂತರ ಚಟುವಟಿಕೆಗಳನ್ನು ತಡೆಗಟ್ಟುವಂತೆ ಸರ್ಕಾರವನ್ನು ಆಗ್ರಹಿಸಿದರು.ಕಾನೂನುಬಾಹಿರವಾಗಿ ವಾಸಿಸುತ್ತಿರುವ ಅಕ್ರಮ ವಲಸಿಗರ ದಾಖಲೆಗಳನ್ನು ಸಂಬಂಧಪಟ್ಟ ಇಲಾಖೆಗಳು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂಬ ಬೇಡಿಕೆಯನ್ನೂ ಪ್ರತಿಭಟನಾಕಾರರು ಮುಂದಿಟ್ಟರು.ಹಿಂದೂ ಸಮಾಜದ ಹಿತಾಸಕ್ತಿಗಳನ್ನು ಕಾಪಾಡುವ ಉದ್ದೇಶದಿಂದ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.ಈ ಪ್ರತಿಭಟನೆಯಲ್ಲಿ ವಿಶ್ವ ಹಿಂದೂ ಪರಿಷತ್ ವಿಭಾಗ ಕಾರ್ಯದರ್ಶಿ ಮೈಪಾಲ್ , ಜಿಲ್ಲಾ ಕಾರ್ಯದರ್ಶಿ ಹರೀಶ್ ಕರಡಿಗಾಲ, ಬಾಲಕೃಷ್ಣ, ವಿಜಯ್ ಕುಮಾರ್, ಹಿಂದೂ ಹಿತರಕ್ಷಣಾ ವೇದಿಕೆಯ ಮುಖಂಡರಾದ ರಘು ಸಕಲೇಶಪುರ, ಕೌಶಿಕ್,ಬಜರಂಗದಳ ವಿಷ್ಣು, ಸೃಜನ್, ರಘು ಬಾಳೆಗದ್ದೆ, ಬಿಜೆಪಿ ಅಧ್ಯಕ್ಷ ತಾಲ್ಲುಕು ಅಧ್ಯಕ್ಷ ವಳಲಹಳ್ಳಿ ಅಶ್ವತ್, ಆರ್ ಎಸ್ ಎಸ್ ಪ್ರಮುಖರಾದ ಸತ್ಯನಾರಾಯಣ ಗುಪ್ತ, ನಂದನ್ , ಸಂಘಟನೆಯ ಪದಾಧಿಕಾರಿಗಳು, ಪ್ರಮುಖರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!