
ಮಲೆನಾಡಿಗೆ ಇನ್ನಷ್ಟು ಕೆಎಸ್‌ಆರ್‌ಟಿಸಿ ಬಸ್ ನೀಡಿ.
ಸಕಲೇಶಪುರ ಡಿಪೋಗೆ ಹೆಚ್ಚುವರಿ ಬಸ್, ಸಿಬ್ಬಂದಿ ಮಂಜೂರಿಗೆ ಸರ್ಕಾರಕ್ಕೆ ಶಾಸಕ ಸಿಮೆಂಟ್ ಮಂಜು ಆಗ್ರಹ
ಆನೆ ಹಾವಳಿ, ವಿಶಾಲ ವ್ಯಾಪ್ತಿ, ಹೆಚ್ಚಿದ ಪ್ರಯಾಣಿಕರ ಸಂಖ್ಯೆ; ಹೊಸ ಸಾರಿಗೆ ಸಚಿವರಿಗೆ ವಿಶೇಷ ಮನವಿ.
ಸಕಲೇಶಪುರ: ಮಲೆನಾಡಿನ ಭೌಗೋಳಿಕ ವೈಶಿಷ್ಟ್ಯ ಹಾಗೂ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಪ್ರಯಾಣಿಕರ ಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ಸಕಲೇಶಪುರ ಕೆಎಸ್‌ಆರ್‌ಟಿಸಿ ಡಿಪೋಗೆ ಹೆಚ್ಚಿನ ಸಂಖ್ಯೆಯಲ್ಲಿ ಹೊಸ ಬಸ್‌ಗಳು ಮತ್ತು ಅಗತ್ಯ ಸಿಬ್ಬಂದಿಯನ್ನು ಮಂಜೂರು ಮಾಡಬೇಕು ಎಂದು ಶಾಸಕ ಸಿಮೆಂಟ್ ಮಂಜು ಸರ್ಕಾರವನ್ನು ಆಗ್ರಹಿಸಿದ್ದಾರೆ.ಈ ಕುರಿತು ಮಾತನಾಡಿದ ಅವರು, ಸಕಲೇಶಪುರವು ರಾಜ್ಯದ ಪ್ರಮುಖ ಮಲೆನಾಡು ತಾಲೂಕುಗಳಲ್ಲಿ ಒಂದಾಗಿದ್ದು, ವಿಶಾಲ ವ್ಯಾಪ್ತಿಯನ್ನು ಹೊಂದಿದೆ. ಅನೇಕ ಗ್ರಾಮಗಳು ಅರಣ್ಯ ಪ್ರದೇಶದಲ್ಲಿರುವುದರಿಂದ ಹಾಗೂ ಆನೆ ಹಾವಳಿ ಹೆಚ್ಚಿರುವ ಕಾರಣ ಸಾರ್ವಜನಿಕರು ಸುರಕ್ಷಿತ ಸಂಚಾರಕ್ಕಾಗಿ ಕೆಎಸ್‌ಆರ್‌ಟಿಸಿ ಬಸ್ ಸೇವೆಯನ್ನೇ ಹೆಚ್ಚಾಗಿ ಅವಲಂಬಿಸಿದ್ದಾರೆ ಎಂದು ಹೇಳಿದರು.ಈ ಹಿಂದೆ ಸಲ್ಲಿಸಿದ್ದ ಮನವಿಗೆ ಸ್ಪಂದಿಸಿ ಸಕಲೇಶಪುರ ಡಿಪೋಗೆ ಎರಡು ಹೊಸ ಬಸ್‌ಗಳನ್ನು ಮಂಜೂರು ಮಾಡಿರುವುದು ಸ್ವಾಗತಾರ್ಹ. ಆದರೆ, ಇಂದಿನ ಬೇಡಿಕೆಗೆ ಅದು ಸಾಕಾಗುವುದಿಲ್ಲ. ಹೆಚ್ಚುತ್ತಿರುವ ಪ್ರಯಾಣಿಕರ ಸಂಖ್ಯೆಯನ್ನು ಗಮನಿಸಿ ಇನ್ನಷ್ಟು ಹೊಸ ಬಸ್‌ಗಳನ್ನು ಮಂಜೂರು ಮಾಡುವುದು ಅಗತ್ಯವಾಗಿದೆ ಎಂದು ತಿಳಿಸಿದರು.ಶಕ್ತಿ ಯೋಜನೆ ಜಾರಿಯಾದ ಬಳಿಕ ಮಹಿಳೆಯರು ಸೇರಿದಂತೆ ಸಾರ್ವಜನಿಕರ ಬಸ್ ಪ್ರಯಾಣದ ಪ್ರಮಾಣ ಗಣನೀಯವಾಗಿ ಹೆಚ್ಚಿದೆ. ಇದರಿಂದ ಹಲವು ಮಾರ್ಗಗಳಲ್ಲಿ ಹೆಚ್ಚುವರಿ ಬಸ್‌ಗಳ ಅವಶ್ಯಕತೆ ಕಂಡುಬಂದಿದೆ. ಗ್ರಾಮೀಣ ಪ್ರದೇಶಗಳಿಗೆ ಹೆಚ್ಚು ಬಸ್‌ಗಳನ್ನು ಒದಗಿಸಿದರೆ ಸಾರ್ವಜನಿಕರ ಸಂಚಾರ ಮತ್ತಷ್ಟು ಸುಗಮವಾಗಲಿದೆ ಎಂದು ಹೇಳಿದರು.ಸಕಲೇಶಪುರ ಡಿಪೋದಲ್ಲಿ ಚಾಲಕರು, ನಿರ್ವಾಹಕರು ಹಾಗೂ ತಾಂತ್ರಿಕ ಸಿಬ್ಬಂದಿಯ ಕೊರತೆಯೂ ಇದೆ. ಅಗತ್ಯ ಸಿಬ್ಬಂದಿಯನ್ನು ನೇಮಕ ಮಾಡಿದರೆ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಇನ್ನಷ್ಟು ಪರಿಣಾಮಕಾರಿಯಾಗಿ ಸೇವೆ ಸಲ್ಲಿಸಲು ಸಾಧ್ಯವಾಗುತ್ತದೆ. ಸರ್ಕಾರ ಈ ನಿಟ್ಟಿನಲ್ಲಿ ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ರಾಜ್ಯದಲ್ಲಿ ಹೊಸ ಸಾರಿಗೆ ಸಚಿವರು ಅಧಿಕಾರ ವಹಿಸಿಕೊಂಡಿರುವ ಹಿನ್ನೆಲೆಯಲ್ಲಿ ಅವರಿಗೆ ವಿಶೇಷ ಮನವಿ ಸಲ್ಲಿಸಲಾಗುವುದು. ಮಲೆನಾಡಿನ ಜನರ ಅಗತ್ಯಕ್ಕೆ ಆದ್ಯತೆ ನೀಡಿ ಸಕಲೇಶಪುರ ಡಿಪೋಗೆ ಹೆಚ್ಚಿನ ಸಂಖ್ಯೆಯಲ್ಲಿ ಹೊಸ ಬಸ್‌ಗಳು ಹಾಗೂ ಸಿಬ್ಬಂದಿಯನ್ನು ಮಂಜೂರು ಮಾಡುವ ಮೂಲಕ ಸಾರ್ವಜನಿಕರ ಸಾರಿಗೆ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಶಾಸಕ ಸಿಮೆಂಟ್ ಮಂಜು ಆಗ್ರಹಿಸಿದರು.ಈ ಸಂಧರ್ಭದಲ್ಲಿ ಸಕಲೇಶಪುರ ಕೆಎಸ್‌ಆರ್‌ಟಿಸಿ ಘಟಕ ವ್ಯವಸ್ಥಾಪಕ ಸುಧೀರ್,ತಾಲ್ಲೂಕು ಬಿಜೆಪಿ ಅಧ್ಯಕ್ಷ ವಳಲಹಳ್ಳಿ ಅಶ್ವಥ್,ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಜ್ ಕುಮಾರ್, ತಾಲ್ಲೂಕು ಕಾರ್ಯದರ್ಶಿ ಅಗ್ನಿ ಸೋಮಶೇಖರ್, ಮುಖಂಡರಾದ ಷಣ್ಮುಖ, ಪ್ರಸನ್ನ ಕುಣಿಗಲ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
